ಈ ತಿಂಗಳ ಕೊನೇ ವಾರದಲ್ಲಿ ಕೇರಳಕ್ಕೆ ಪ್ರವೇಶಿಸುವ ಸಾಧ್ಯತೆ
ನವದೆಹಲಿ : ಸುಡು ಬಿಸಿಲಿನ ಬೇಗೆಯಿಂದ ಬಳಲುತ್ತಿರುವ ದೇಶಕ್ಕೆ ಹವಾಮಾನ ಇಲಾಖೆ ತಂಪೆರೆಯುವಂಥ ಸುದ್ದಿ ನೀಡಿದೆ. ಹವಾಮಾನ ಇಲಾಖೆಯ ಅಂದಾಜಿನ ಪ್ರಕಾರ ಈ ವರ್ಷ ಮುಂಗಾರು ಅವಧಿಗೂ ಮುನ್ನವೇ ದೇಶವನ್ನು ಪ್ರವೇಶಿಸಲಿದೆ.
ಈ ಬಾರಿ ನೈಋತ್ಯ ಮುಂಗಾರು ಮಾರುತ ಅವಧಿಗಿಂತ ಮುಂಚೆಯೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಪ್ರವೇಶಿಸುವ ಸಾಧ್ಯತೆ ಇದೆ. ಮೇ 14ರಿಂದ 16ರ ನಡುವೆ ಮುಂಗಾರು ಅಂಡಮಾನ್ ಪ್ರದೇಶಕ್ಕೆ ತಲುಪುವ ನಿರೀಕ್ಷೆಯಿದ್ದು, ಬಳಿಕ ಜೂನ್ 1ರ ಬದಲು ಮೇ ಕೊನೆಯ ವಾರದಲ್ಲೇ ಕೇರಳ ಕರಾವಳಿಗೆ ಅಪ್ಪಳಿಸಬಹುದು ಎಂದು ಇಲಾಖೆ ತಿಳಿಸಿದೆ.
ಮೇ ತಿಂಗಳಲ್ಲಿ ದೇಶದ ಹಲವು ಭಾಗಗಳಲ್ಲಿ ವಾಡಿಕೆಯಿಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದ್ದು, ಇದು ಕೃಷಿ ಚಟುವಟಿಕೆಗಳಿಗೆ ಕೆಲ ಮಟ್ಟಿಗೆ ಸಹಕಾರಿ ಆಗಬಹುದು. ಆದರೆ, ಈಶಾನ್ಯ, ಪೂರ್ವ ಹಾಗೂ ಕೇಂದ್ರ ಭಾರತದ ಕೆಲವು ಪ್ರದೇಶಗಳಲ್ಲಿ ಮಳೆಯ ಪ್ರಮಾಣ ವಾಡಿಕೆಯಷ್ಟೇ ಅಥವಾ ಅದಕ್ಕಿಂತ ಕಡಿಮೆ ಇರುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಇದರ ನಡುವೆ ದೇಶದ ಬಹುತೇಕ ಭಾಗಗಳಲ್ಲಿ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ. ವಿಶೇಷವಾಗಿ ಉತ್ತರ ಭಾರತ ಹಾಗೂ ಹಿಮಾಲಯದ ತಪ್ಪಲಿನ ಪ್ರದೇಶಗಳಲ್ಲಿ ಹೀಟ್‌ವೇವ್ ಪರಿಣಾಮ ಹೆಚ್ಚು ಕಾಣಿಸಿಕೊಳ್ಳಬಹುದು. ಏಪ್ರಿಲ್ ತಿಂಗಳಲ್ಲಿ ದಕ್ಷಿಣ ಭಾರತದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗಿದ್ದರೆ, ಇತರ ಭಾಗಗಳಲ್ಲಿ ಕನಿಷ್ಠ ತಾಪಮಾನ ಸಾಮಾನ್ಯ ಮಟ್ಟದಲ್ಲೇ ಇತ್ತು.
ಪೆಸಿಫಿಕ್ ಮಹಾಸಾಗರದಲ್ಲಿ ನೀರಿನ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆಲೆ ‘ಎಲ್ ನಿನೊ’ ಪರಿಸ್ಥಿತಿ ನಿರ್ಮಾಣವಾಗಿದ್ದು, ಇದು ಈ ವರ್ಷದ ಮುಂಗಾರು ಮಳೆಯ ಪ್ರಮಾಣದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಒಟ್ಟಾರೆ ಮಳೆಯ ಪ್ರಮಾಣ ವಾಡಿಕೆಗಿಂತ ಕಡಿಮೆಯಾಗುವ ಸಾಧ್ಯತೆ ಇದೆ ಎಂಬ ಅಂದಾಜು ವ್ಯಕ್ತವಾಗಿದೆ. ಹವಾಮಾನ ಇಲಾಖೆ ನೀಡಿರುವ ಈ ಮುನ್ಸೂಚನೆ ಹಿನ್ನೆಲೆಯಲ್ಲಿ ರೈತರು ಹಾಗೂ ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.
























