ರಾಜ್ಯದ ರಾಜಕಾರಣದಲ್ಲಿ ಅಭೂತಪೂರ್ವ ವಿದ್ಯಮಾನ
ಮೂರು ವರ್ಷ ಶಾಸಕರಾಗಿದ್ದ ಕಾಂಗ್ರೆಸ್ ಅಭ್ಯರ್ಥಿಗೆ ಸೋಲಿನ ಭೀತಿ
ಚಿಕ್ಕಮಗಳೂರು: ಶೃಂಗೇರಿ ಕ್ಷೇತ್ರದ ಅಂಚೆ ಮತ ಮರು ಎಣಿಕೆ ಭಾರಿ ದೊಡ್ಡ ಬದಲಾವಣೆಗೆ ನಾಂದಿ ಹಾಡಿದೆ. ಮತ ಎಣಿಕೆಯ ಅಂತಿಮ ಫಲಿತಾಂಶದಲ್ಲಿ ಬಿಜೆಪಿ ಅಭ್ಯರ್ಥಿ ಜೀವರಾಜ್ 52 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಚುನಾವಣಾ ಅಧಿಕಾರಿಗಳಿಂದ ಅಧಿಕೃತ ಘೋಷಣೆ ಬಾಕಿ ಇದೆ.
ಇದುವರೆಗೂ ಚುನಾವಣಾ ಅಧಿಕಾರಿಗಳು ಫಲಿತಾಂಶ ಘೋಷಣೆ ಮಾಡಿಲ್ಲ. ಮತ ಎಣಿಕೆಯ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಕೋರ್ಟ್‌ಗೆ ರವಾನೆ ಮಾಡಲಾಗಿದೆ. ಬಹಳ ಸೂಕ್ಷ್ಮ ಮತ್ತು ರಾಜಕೀಯವಾಗಿ ನಿರ್ಣಾಯಕ ವಿಚಾರವಾಗಿರುವುದರಿಂದ ಫಲಿತಾಂಶ ಘೋಷಣೆ ಬಾಕಿ ಇದೆ.
ಈ ಕುರಿತು ಬಿಜೆಪಿ ಅಭ್ಯರ್ಥಿ ಜೀವರಾಜ್ ಮಾತನಾಡಿದ್ದು, ಅಧಿಕೃತ ಅಂತರದ ಬಗ್ಗೆ ಏನೂ ಹೇಳಿಲ್ಲ. ಆದರೆ, ನಾನು ಮುನ್ನಡೆಯಲ್ಲಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. 3 ವರ್ಷದ ಕಾನೂನು ಹೋರಾಟಕ್ಕೆ ನ್ಯಾಯ ಸಿಕ್ಕಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಮತ ಪತ್ರಗಳನ್ನ ಸ್ಟ್ರಾಂಗ್ ರೂಂನಲ್ಲಿ ಸೀಲ್ ಮಾಡಿದ ಬಳಿಕ ಚುನಾವಣಾ ಅಧಿಕಾರಿ ಮಾತನಾಡಿ, ಹೈಕೋರ್ಟ್ ಸೂಚನೆಯಂತೆ ಅಂಚೆ ಮತಗಳ ಮರು ಎಣಿಕೆ ಪೂರ್ಣವಾಗಿದೆ. ಮರು ಎಣಿಕೆ ನಡೆದಿರುವುದು ಅಂಚೆ ಮತಗಳು ಮಾತ್ರ. 1822 ಅಂಚೆ ಮತಗಳನ್ನು ಮರು ಪರಿಶೀಲನೆ ಮಾಡಿ ಎಣಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
2023ರ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಜೀವರಾಜ್‌ಗೆ 692 ಮತ, ಕಾಂಗ್ರೆಸ್ ಅಭ್ಯರ್ಥಿ ರಾಜೇಗೌಡಗೆ 569 ಮತ ಬಿದ್ದಿತ್ತು. 2026ರ ಮರು ಎಣಿಕೆಯಲ್ಲಿ ಜೀವರಾಜ್ 690 ಮತ (2 ಮತ ಕಡಿಮೆ) ರಾಜೇಗೌಡ 314 ಮತ (251 ಮತ ಕಡಿಮೆ) ಪಡೆದಿದ್ದಾರೆ. ರಾಜೇಗೌಡರಿಗೆ ಬಿದ್ದ 318 ಮತಗಳು ಮರು ಎಣಿಕೆಯಲ್ಲಿ ಅಸಿಂಧು ಎಂದು ಘೋಷಿಸಲಾಗಿದೆ. ಎಲ್ಲಾ ವರದಿಗಳನ್ನು ಚುನಾವಣಾ ಆಯೋಗ ಮತ್ತು ಹೈಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ. ಮತ ಟ್ಯಾಂಪರಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಲು ನನಗೆ ಅಧಿಕಾರ ಇಲ್ಲ. ಚುನಾವಣಾಧಿಕಾರಿ ಗೌರವ್ ಕುಮಾರ್ ಶೆಟ್ಟಿ ಹೇಳಿಕೆ ನೀಡಿದ್ದಾರೆ.
ಕಳೆದ ಏಪ್ರಿಲ್ 6ರಂದು ಹೈಕೋರ್ಟ್ ಹೊರಡಿಸಿದ ಆದೇಶದ ಪ್ರಕಾರ ಸುಮಾರು 279 ಅಂಚೆ ಮತಪತ್ರಗಳನ್ನು ಮರು ಪರಿಶೀಲನೆ ಮತ್ತು ಮರು ಎಣಿಕೆ ಮಾಡಲಾಯಿತು. ಇವಿಎಂ ಮತಗಳ ಬಗ್ಗೆ ಯಾವುದೇ ಆದೇಶವಿರಲಿಲ್ಲ. ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೋಳಿ ಅವರು ಅಂದಿನ ಚುನಾವಣಾಧಿಕಾರಿ ವೇದಮೂರ್ತಿ ವಿರುದ್ಧ ಅಂಚೆ ಮತಗಳ ಟ್ಯಾಂಪರಿಂಗ್ ಆರೋಪದ ಮೇಲೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಕೈಗೊಳ್ಳಲಾಯಿತು. ಮರು ಎಣಿಕೆಯ ನಂತರ ಅಭ್ಯರ್ಥಿಗಳ ಮತಗಳಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬಂದಿವೆ. 2023ರ ಮತ ಎಣಿಕೆಯಲ್ಲಿ ಮೇಲ್ಮನವಿದಾರ ಡಿ.ಎನ್ ಜೀವರಾಜ್ ಅವರಿಗೆ 692 ಮತಗಳು ಬಂದಿದ್ದರೆ, ಮರು ಎಣಿಕೆಯ ನಂತರ ಅದು 690ಕ್ಕೆ ಇಳಿದಿದೆ. ಇನ್ನು ಎದುರುದಾರ ಟಿ ಡಿ ರಾಜೇಗೌಡರಿಗೆ ಮೂಲತಃ 569 ಮತಗಳು ಬಂದಿದ್ದವು. ಆದರೆ ಮರು ಎಣಿಕೆಯ ನಂತರ ಅವರ ಮತಗಳ ಸಂಖ್ಯೆ 314ಕ್ಕೆ ಇಳಿದು 255 ಮತಗಳ ವ್ಯತ್ಯಾಸವಾಗಿದೆ. ಈ ಕುರಿತು ವರದಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ. ಸ್ಟ್ರಾಂಗ್ ರೂಂ ಅನ್ನು ಸೀಲ್ ಮಾಡಲಾಗಿದೆ ಎಂದು ಚುನಾವಣಾಧಿಕಾರಿ ಹೇಳಿದ್ದಾರೆ.
























