ನಾಳೆ ಪಂಚ ರಾಜ್ಯ ಚುನಾವಣೆಯ ಮತ ಎಣಿಕೆ: ದೇಶದ ಚಿತ್ತ ಫಲಿತಾಂಶದತ್ತ

ಪಶ್ಚಿಮ ಬಂಗಾಳ ಕುತೂಹಲದ ಕುದಿಬಿಂದು

ನವದೆಹಲಿ : ಅಸ್ಸಾಂ, ಕೇರಳ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಸೋಮವಾರ ನಡೆಯಲಿದೆ. ದೇಶದ ರಾಜಕೀಯದ ಭವಿಷ್ಯದ ದಿಕ್ಸೂಚಿ ಎಂದು ಭಾವಿಸಲಾಗಿರುವ ಈ ಪಂಚ ರಾಜ್ಯಗಳ ಫಲಿತಾಂಶದತ್ತ ಇಡೀ ದೇಶದ ದೃಷ್ಟಿ ನೆಟ್ಟಿದೆ. ಫಲಿತಾಂಶ ಸೋಮವಾರ ಬೆಳಗ್ಗೆ ಮತ ಎಣಿಕೆ ಪ್ರಾರಂಭವಾಗಲಿದ್ದು, ಮೊದಲು ಅಂಚೆ ಮತಪತ್ರಗಳನ್ನು ಎಣಿಸಿ ನಂತರ ಇವಿಎಂಗಳಲ್ಲಿ ದಾಖಲಾದ ಮತಗಳನ್ನು ಎಣಿಸುವ ಪ್ರಕ್ರಿಯೆ ನಡೆಯಲಿದೆ. ಸೋಮವಾರ ಸಂಜೆಯೊಳಗೆ ಫಲಿತಾಂಶ ಬರುವ ನಿರೀಕ್ಷೆಯಿದೆ.

ಚುನಾವಣೋತ್ತರ ಸಮೀಕ್ಷೆಗಳು ಈಗಾಗಲೇ ಫಲಿತಾಂಶದ ಒಂದು ಸ್ಥೂಲ ನೋಟವನ್ನು ನೀಡಿವೆ. ಆ ಪ್ರಕಾರ ಕೇರಳದಲ್ಲಿ ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌, ತಮಿಳುನಾಡಿನಲ್ಲಿ ಡಿಎಂಕೆ, ಅಸ್ಸಾಂನಲ್ಲಿ ಬಿಜೆಪಿ ಮತ್ತು ಪುದುಚೇರಿಯಲ್ಲಿ ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ. ಆದರೆ ಪಶ್ಚಿಮ ಬಂಗಾಳದ ಫಲಿತಾಂಶದ ಬಗ್ಗೆ ಮಾತ್ರ ನಿಖರವಾಗಿ ಭವಿಷ್ಯ ನುಡಿಯಲು ಯಾವ ಸಮೀಕ್ಷೆಗೂ ಸಾಧ್ಯವಾಗಿಲ್ಲ. ಕೆಲವು ಸಮೀಕ್ಷೆಗಳು ಟಿಎಂಸಿ ಮತ್ತು ಕೆಲವು ಸಮೀಕ್ಷೆಗಳು ಬಿಜೆಪಿ ಎಂದು ಹೇಳಿವೆ. ಬೆಟ್ಟಿಂಗ್‌ ಬಜಾರ್‌ನಲ್ಲಿ ಕೂಡ ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿ 50:50 ಆಯ್ಕೆ ಇಟ್ಟುಕೊಳ್ಳಲಾಗಿದೆ.





















































 
 

ಪಂಚ ರಾಜ್ಯಗಳ ಪೈಕಿ ಭಾರಿ ಕುತೂಹಲ ಮೂಡಿಸಿರುವುದು ಪಶ್ಚಿಮ ಬಂಗಾಳ. ಈ ಬಾರಿಯ ಚುನಾವಣೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಬಹಳ ನಿರ್ಣಾಯಕವಾಗಿದೆ. ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ಈ ಬಾರಿ ಬಿಜೆಪಿ ನೇರ ಪೈಪೋಟಿಗೆ ಇಳಿದಿದೆ. ಎಕ್ಸಿಟ್ ಪೋಲ್ ವರದಿ ಪ್ರಕಾರ ಈ ಬಾರಿ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಹೀಗಾಗಿ, ಮಮತಾ ಬ್ಯಾನರ್ಜಿ ತನ್ನ ಖುರ್ಚಿ ಉಳಿಸಿಕೊಳ್ಳುತ್ತಾರೋ ಇಲ್ಲವೋ ಎಂಬ ಕುತೂಹಲ ಹೆಚ್ಚಾಗಿದೆ.

ಪ್ರತಿ ಚುನಾವಣೆಯಲ್ಲೂ ಹತ್ತಾರು ಕೊಲೆ, ದೊಂಬಿ, ಗಲಾಟೆ ಪ್ರತಿಭಟನೆ ಸಂಭವಿಸಿ ಹಿಂಸಾಚಾರದ ಗೂಡಾಗುತ್ತಿದ್ದ ಪಶ್ಚಿಮ ಬಂಗಾಳದಲ್ಲಿ ಈ ಸಲ ಶಾಂತಿಯುತ ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಸಾಕಷ್ಟು ಶ್ರಮಿಸಿದೆ. ಇದರಿಂದಾಗಿ ಹಿಂಸಾಚಾರ ಸಾಕಷ್ಟು ನಿಯಂತ್ರಣಕ್ಕೆ ಬಂದಿದೆ. ಆದರೂ ಕೆಲವೊಂದು ಘಟನೆಗಳು ನಡೆದಿದ್ದು, ಕೆಲವೆಡೆ ಚುನಾವಣಾ ಅಕ್ರಮಗಳು ಕೂಡ ನಡೆದಿವೆ. ಕಳೆದ ಮೂರು ಅವಧಿಗೆ ಇಲ್ಲಿ ಮಮತಾ ಬ್ಯಾನರ್ಜಿಯ ತೃಣಮೂಲ ಕಾಂಗ್ರೆಸ್‌ ಅಧಿಕಾರದಲ್ಲಿದೆ. ಈ ಸಲ ಅಧಿಕಾರಕ್ಕೇರಲು ಬಿಜೆಪಿ ತನ್ನ ಸರ್ವ ಸಾಮರ್ಥ್ಯವನ್ನು ಪ್ರಯೋಗಕ್ಕೊಡ್ಡಿದೆ.

ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ತನ್ನ ಹಿಡಿತವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಆದರೆ ಬಿಜೆಪಿ ಬೆಂಬಲಿತ ಎಐಎಡಿಎಂಕೆ ಕೂಡ ಸಾಕಷ್ಟು ಪೈಪೋಟಿ ನೀಡಿದೆ. ಸದ್ಯದ ಸಮೀಕ್ಷೆ ಪ್ರಕಾರ ತಮಿಳುನಾಡಿನಲ್ಲಿ ಕಾಂಗ್ರೆಸ್ ಬೆಂಬಲಿತ ಡಿಎಂಕೆ ಮತ್ತೆ ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಾಗಿದೆ. ಕೇರಳದಲ್ಲಿ ಈ ಬಾರಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಧಿಕಾರಕ್ಕೆ ಬರುವ ನಿರೀಕ್ಷೆಯಿದೆ. ಅಸ್ಸಾಂನಲ್ಲಿ, ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಬಿಜೆಪಿ ತನ್ನ ಭದ್ರಕೋಟೆಯನ್ನು ರಕ್ಷಿಸಿಕೊಳ್ಳುವ ಗುರಿಯನ್ನು ಹೊಂದಿದೆ.

ಸೋಮವಾರ ಬೆಳಗ್ಗೆ 8 ಗಂಟೆಗೆ ನಿಗದಿತ ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ಪ್ರಾರಂಭವಾಗಲಿದೆ. ವಿಧಾನಸಭಾ ಚುನಾವಣೆಯ ಅಧಿಕೃತ ಫಲಿತಾಂಶಗಳನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ (eci.gov.in) ವೀಕ್ಷಿಸಬಹುದು.

ಫಾಲ್ಟಾದಲ್ಲಿ ಮರು ಮತದಾನ

ಪಶ್ಚಿಮ ಬಂಗಾಳದ ಫಾಲ್ಟಾ ವಿಧಾನಸಭಾ ಕ್ಷೇತ್ರದ ಎಲ್ಲಾ 285 ಮತಗಟ್ಟೆಗಳಲ್ಲಿ ಮರುಮತದಾನ ನಡೆಸಲು ಭಾರತೀಯ ಚುನಾವಣಾ ಆಯೋಗ ಶನಿವಾರ ಆದೇಶ ಹೊರಡಿಸಿದೆ. ಬಂಗಾಳದಲ್ಲಿ 2ನೇ ಹಂತದ ಮತದಾನದ ವೇಳೆ ಇವಿಎಂ ಯಂತ್ರಗಳಲ್ಲಿ ಅಕ್ರಮ ಅಥವಾ ತಿರುಚುವಿಕೆ ಕಂಡುಬಂದ ಹಿನ್ನೆಲೆಯಲ್ಲಿ ಎಲ್ಲ 285 ಮತಗಟ್ಟೆಗಳಲ್ಲಿ ಮರುಮತದಾನ ನಡೆಸಲು ಆದೇಶಿಸಲಾಗಿದೆ.

ಮೇ 21ರಂದು ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ಫಾಲ್ಟಾ ಕ್ಷೇತ್ರದ 285 ಮತಗಟ್ಟೆಗಳಲ್ಲಿ ಮರು ಮತದಾನ ನಡೆಸಲಾಗುವುದು. ಮೇ 24 ರಂದು ಫಲಿತಾಂಶ ಹೊರಬೀಳಲಿದೆ ಎಂದು ಆಯೋಗ ಮಾಹಿತಿ ನೀಡಿದೆ.

error: Content is protected !!
Scroll to Top