ಜಿಡೆಕಲ್ಲು: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭ ಆಕರ್ಷಕವಾಗಿ ನಡೆಯಿತು.
ಕಾಲೇಜು ಅಭಿವೃದ್ಧಿಗೆ ಕೈ ಜೋಡಿಸೋಣ, ಪ್ರಾಂಶುಪಾಲರ ಪ್ರಯತ್ನ ಸ್ತುತ್ಯರ್ಹ – ಶಾಸಕ ಅಶೋಕ್ ಕುಮಾರ್ ರೈ ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಜೀವನದಲ್ಲಿ ಯೋಗ್ಯವಾದ ಶಿಕ್ಷಣದ ಆಯ್ಕೆ ಮಾಡಿಕೊಳ್ಳಬೇಕು ಮತ್ತು ವಿದ್ಯಾರ್ಥಿಗಳು ಸಾಧನೆ ಮಾಡುವ ಮೂಲಕ ಸಂಸ್ಥೆಗೆ ಫಲ ನೀಡಬೇಕು ಎಂದರು. ವಿಧೇಯತೆ ಮತ್ತು ಯೋಜನಾಬದ್ಧ ಕಾರ್ಯ ನಿರ್ವಹಣೆಗಳನ್ನು ಪ್ರಾಯೋಗಿಕವಾಗಿ ಕಲಿತು ಜೀವನ ನಿರ್ವಹಣೆ ಮಾಡುವ ಕನಸು ಕಾಣಬೇಕು ಎಂದು ನುಡಿದ ಅವರು ಕಾಲೇಜಿನ ಅಭಿವೃದ್ಧಿಯಲ್ಲಿ ಎಲ್ಲರೂ ಕೈಜೋಡಿಸೋಣ ಎಂದು ಕರೆ ನೀಡಿದರು. ಇಲ್ಲಿನ ಪ್ರಾಂಶುಪಾಲ ಸುಬ್ಬಪ್ಪ ಕೈಕಂಬ ಮತ್ತು ಅವರ ತಂಡದವರು ವಿದ್ಯಾರ್ಥಿಗಳ ಸಂಖ್ಯೆಯನ್ನು ನೂರಕ್ಕೆ ತಲುಪಿಸುವಲ್ಲಿ ಶ್ರಮಿಸಿದ್ದು ಮುಂದಿನ ವರ್ಷ ಅದು ಐನೂರು ಆಗಬೇಕು ಎಂದು ಹೇಳಿ ಅದಕ್ಕೆ ಬೇಕಿರುವ ಸವಲತ್ತುಗಳಿಗಾಗಿ ನಾನು ಸೂಕ್ತ ಆನುದಾನ ಒದಗಿಸಿಕೊಡುತ್ತೇನೆ ಎಂದರು.

ಪಂಚ ಸೂತ್ರಗಳು ಯಶ ನೀಡುತ್ತವೆ – ಬಲರಾಮ ಆಚಾರ್ಯ
ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ಪುತ್ತೂರಿನ ಖ್ಯಾತ ಸ್ವರ್ಣೋದ್ಯಮಿ ಬಲರಾಮ ಆಚಾರ್ಯರು ಮಾತನಾಡಿ ಜ್ಞಾನಾರ್ಜನೆ, ನಾಗರಿಕ ಪ್ರಜ್ಞೆ, ಕೆಲಸದ ಸಂಸ್ಕೃತಿ, ಆರೋಗ್ಯ ರಕ್ಷಣೆ, ಮತ್ತು ಪರಿಸರದ ಕಾಳಜಿಗಳೆಂಬ ಪಂಚ ಸೂತ್ರಗಳ ಕುರಿತಾಗಿ ಮಾರ್ಮಿಕ ಸಂದೇಶ ನೀಡಿದರು.
ವಿದ್ಯಾರ್ಥಿ ಜೀವನವು ಜೀವನದ ಸುವರ್ಣಾವಕಾಶ – ಎನ್. ದುಗ್ಗಪ್ಪ
ಸಮಾರಂಭವನ್ನು ಉದ್ಘಾಟಿಸಿದ ಕಾಲೇಜು ಅಭಿವೃದ್ಧಿ ಮಂಡಳಿಯ ಕಾರ್ಯಾಧ್ಯಕ್ಷ ದುಗ್ಗಪ್ಪ ಎನ್. ಅವರು ವಿದ್ಯಾರ್ಥಿ ಜೀವನವು ಜೀವನದ ಸುವರ್ಣಾವಕಾಶ ಎಂದು ಹೇಳಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಪೂರಕವಾದ ಹಿತನುಡಿಗಳನ್ನು ನೀಡಿದರು.
ಕಾಲೇಜು ಇನ್ನೂ ಸಾಕಷ್ಟು ಬೆಳೆಯಬೇಕಿದೆ, ಬೆಳೆಸುತ್ತೇವೆ. ನಿಮ್ಮೆಲ್ಲರ ಸಹಕಾರವಿರಲಿ – ಸುಬ್ಬಪ್ಪ ಕೈಕಂಬ
ಪ್ರಾಂಶುಪಾಲ ಪ್ರೊ. ಸುಬ್ಬಪ್ಪ ಕೈಕಂಬ ಅವರು ಅಧ್ಯಕ್ಷತೆ ವಹಿಸಿ ಕಾಲೇಜಿನ ವಾರ್ಷಿಕ ವರದಿಯನ್ನು ಮಂಡಿಸಿದರು. ಮುಂದೆ ಮಾತನಾಡಿದ ಅವರು ಮುಂಬರುವ ವರ್ಷಗಳಲ್ಲಿ ಕಾಲೇಜಿನ ಬೆಳವಣಿಗೆ ಹೇಗಿರಬೇಕೆಂಬ ಚಿತ್ರಣವನ್ನು ಪ್ರಸ್ತುತಪಡಿಸಿದರು.
ಸನ್ಮಾನ
ಇತ್ತೀಚೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದಿಂದ ಪಿಎಚ್.ಡಿ . ಪದವಿ ಗಳಿಸಿದ ಕನ್ನಡ ವಿಭಾಗದ ಮುಖ್ಯಸ್ಥೆ ಡಾಕ್ಟರ್ ಹರಿಣಾಕ್ಷಿ ಎಂ. ಡಿ. ಮತ್ತು
ಸಿವಿಲ್ ಜಡ್ಜ್, ಆಗಿ ನೇಮಕಗೊಂಡ, ಕಾಲೇಜಿನ ಹಿರಿಯ ವಿದ್ಯಾರ್ಥಿನಿ, ಶ್ರೀಮತಿ ದೀಪಿಕಾ ಎಸ್. ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉಪನ್ಯಾಸಕಿಯರಾದ ಯೋಗಿತಾ ಮತ್ತು ಶ್ರೀಮತಿ ರಜನಿ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಕನ್ನಡ ಭಾಷಾ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಮೂವರು ವಿದ್ಯಾರ್ಥಿನಿಯರಿಗೆ ಡಾ. ಹರಿಣಾಕ್ಷಿ ಎಂ.ಡಿ. ಮತ್ತು ಶ್ರೀಮತಿ ನಳಿನಿ ಅವರು ವೈಯಕ್ತಿಕವಾಗಿ ಪ್ರಾಯೋಜಿಸಿದ ನಗದು ಮತ್ತು ವಸ್ತುಗಳ ಬಹುಮಾನಗಳನ್ನು ವಿತರಿಸಲಾಯಿತು.
ಪ್ರೊ. ಪುಷ್ಪರಾಜ್ ಸ್ವಾಗತ,
ಶ್ರೀಮತಿ ನಳಿನಿ ಧನ್ಯವಾದ ಸಮರ್ಪಣೆ, ವಿದ್ಯಾರ್ಥಿನಿ ಸೌಜನ್ಯಾ ಮತ್ತು ಬಳಗ ಪ್ರಾರ್ಥನೆಗಳಲ್ಲಿ ಸಹಕರಿಸಿದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ರಕ್ಷಿತಾ ಮತ್ತು ವಿದ್ಯಾರ್ಥಿನಿ ಮನಸ್ವಿ ಕಾರ್ಯಕ್ರಮವನ್ನು ನಿರೂಪಿಸಿದರು. ಅಪರಾಹ್ನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

























