ತಾಪಮಾನದಲ್ಲಿ ಇನ್ನೂ 3-4 ಸೆಲ್ಸಿಯಸ್ ಡಿಗ್ರಿ ಏರಿಕೆ ಸಾಧ್ಯತೆ
ಬೆಂಗಳೂರು: ಈ ವರ್ಷ ಬೇಸಿಗೆ ಕರ್ನಾಟಕದ ಪಾಲಿಗೆ ಕರಾಳವಾಗಿದೆ. ಕರಾವಳಿ ಜಿಲ್ಲೆಯೂ ಸೇರಿದಂತೆ ಎಲ್ಲೆಡೆ ಸುಡುಬಿಸಿಲಿನಿಂದಾಗಿ ಜನ ಕಂಗಾಲಾಗಿದ್ದಾರೆ. ಕರ್ನಾಟಕ ಕಾದ ಕಾವಲಿಯಂತಾಗಿದೆ. ಇದರ ನಡುವೆ ಮೇ ತಿಂಗಳಲ್ಲಿ ತಾಪಮಾನ ಇನ್ನಷ್ಟು ಏರಿಕೆಯಾಗಲಿದ್ದು, ಬಿಸಿಲಿನ ಪ್ರತಾಪ ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಏಪ್ರಿಲ್ ತಿಂಗಳಲ್ಲೇ ಸುಡುವ ಸೂರ್ಯನ ಪ್ರತಾಪಕ್ಕೆ ಕರುನಾಡು ಹೈರಾಣಾಗಿದೆ. ಮೇ ತಿಂಗಳಲ್ಲಿ ಸೂರ್ಯ ಇನ್ನೂ ಉಗ್ರ ಪ್ರತಾಪಿಯಾಗಲಿದ್ದಾನೆ. ಮೇ ತಿಂಗಳಲ್ಲಿ ಅಸಲಿ ಬಿಸಿಲಾಘಾತ ಶುರುವಾಗುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮೇ ತಿಂಗಳಲ್ಲಿ 3-4 ಡಿಗ್ರಿ ಸೆಲ್ಸಿಯಸ್ ಬಿಸಿಲು ಹೆಚ್ಚಳವಾಗುತ್ತೆ ಎಂದು ಹವಮಾನ ಇಲಾಖೆ ಹೇಳಿದ್ದು, ಮೇ ಮೊದಲ ವಾರದಲ್ಲಿಯೇ ಬೆಂಗಳೂರು ಸೇರಿದಂತೆ ಕರ್ನಾಟಕ ಇನ್ನೂ ಸುಡಲಿದೆ ಎಂದು ಎಚ್ಚರಿಸಿದೆ. ಬೇಸಿಗೆಯಲ್ಲಿ ಆಗೊಮ್ಮೆ- ಈಗೊಮ್ಮೆ ಬರುತ್ತಿದ್ದ ಮಳೆ ಈ ವರ್ಷ ಕಾಣೆಯಾಗಿದ್ದು, ಬಿಸಿಲ ಧಗೆ ಹೆಚ್ಚಾಗಿದೆ.
ದೇಶದಲ್ಲಿ ಹಿಂದೆಂದಿಗಿಂತಲೂ ಬಿಸಿಲ ತಾಪಮಾನ ಜಾಸ್ತಿ ಇದ್ದು, ಮೇ ಅಂತ್ಯದವರೆಗೂ ಮುಂದುವರಿಯುವ ಸಾಧ್ಯತೆ ಇದೆ. ಮುಂದಿನ ತಿಂಗಳು ಸ್ವಲ್ಪ ಮಳೆಯಾದರೆ, ತಾಪಮಾನ ಕಡಿಮೆ ಆಗಬಹುದು. ಇಲ್ಲದಿದ್ದರೆ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ಕೊಟ್ಟಿದೆ.
ಜಗತ್ತಿನ ಅತ್ಯಂತ ಹೆಚ್ಚಿನ ತಾಪಮಾನವಿರುವ 100 ನಗರಗಳಲ್ಲಿ ದೇಶದ 95 ನಗರಗಳಿವೆ ಎಂದು ರಾಷ್ಟ್ರೀಯ ಹವಾಮಾನ ಮುನ್ಸೂಚನಾ ಕೇಂದ್ರ ಮಾಹಿತಿ ನೀಡಿದೆ. ದೇಶದ ಬಹುಭಾಗದಲ್ಲಿನ ತಾಪಮಾನ ಸಾಮಾನ್ಯಕ್ಕಿಂತ 5 ಡಿಗ್ರಿ ಹೆಚ್ಚು ಹಾಗೂ ಅದಕ್ಕಿಂತ ಜಾಸ್ತಿ ಇದೆ ಅಂತ ಹವಾಮಾನ ಇಲಾಖೆ ಹೇಳಿದೆ.

























