ಹುಮ್ಮಸ್ಸಿನಿಂದ ಮತಗಟ್ಟೆಗಳತ್ತ ಧಾವಿಸುತ್ತಿರುವ ಜನ
ಕೋಲ್ಕತ್ತಾ : ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದ ಚುನಾವಣೆ ಇಂದು ನಡೆಯುತ್ತಿದೆ. ಬೆಳಗ್ಗಿನಿಂದಲೇ ಮತದಾರರು ಸಾಲುಗಟ್ಟಿ ಮತಗಟ್ಟೆಗಳತ್ತ ಧಾವಿಸುತ್ತಿದ್ದು, ಮೊದಲ ಹಂತದ ದಾಖಲೆ ಮತದಾನದ ಹುಮ್ಮಸ್ಸು ಎರಡನೇ ಹಂತದಲ್ಲೂ ಕಾಣಿಸುತ್ತಿದೆ. 142 ಕ್ಷೇತ್ರಗಳಲ್ಲಿ ನಡೆಯಲಿರುವ ಈ ಅಂತಿಮ ಹಂತದ ಚುನಾವಣೆಯು ರಾಜ್ಯದ ಮುಂದಿನ ಸರ್ಕಾರ ಯಾರದ್ದು ಎಂಬುದನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.
ಎರಡನೇ ಹಂತದಲ್ಲಿ 142 ಕ್ಷೇತ್ರಗಳಿದ್ದು ಅದರಲ್ಲಿ ನಾಡಿಯಾ, ಪುರ್ಬಾ ಬರ್ಧಮಾನ್, ಹೌರಾ, ಹೂಗ್ಲಿ, ಕೋಲ್ಕತ್ತಾ ಸೇರಿ 7 ಜಿಲ್ಲೆಗಳಿವೆ. ಒಟ್ಟು 1,448 ಮಂದಿ ಕಣದಲ್ಲಿದ್ದಾರೆ. 3.21 ಕೋಟಿಗೂ ಹೆಚ್ಚು ಮತದಾರರು ಅರ್ಹರಾಗಿದ್ದಾರೆ. ಅದರಲ್ಲಿ 1.64 ಕೋಟಿ ಪುರುಷರು, 1.57 ಕೋಟಿ ಮಹಿಳೆಯರು ಮತ್ತು 792 ತೃತೀಯ ಲಿಂಗಿಗಳಿದ್ದಾರೆ.
ಮೊದಲ ಹಂತದ ಚುನಾವಣೆಯಲ್ಲಿ (ಏಪ್ರಿಲ್ 23) ದಾಖಲೆಯ ಶೇ. 93.19 ರಷ್ಟು ಮತದಾನವಾಗಿದ್ದು, ಅದನ್ನು ಮೀರಿಸುವ ಉತ್ಸಾಹ ಎರಡನೇ ಹಂತದಲ್ಲಿ ಕಂಡುಬರುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಕೇಂದ್ರ ಪಡೆಗಳ 2,407 ಕಂಪನಿಗಳನ್ನು ನಿಯೋಜಿಸಲಾಗಿದೆ. ರಾಜ್ಯ ಮತ್ತು ಕೋಲ್ಕತ್ತಾ ಪೊಲೀಸರು ಬಿಗಿ ಭದ್ರತೆಯಲ್ಲಿ ಭಾಗಿಯಾಗಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಆಡಳಿತರೂಢ ಟಿಎಂಸಿ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ಈ ಸಲ ಅಧಿಕಾರಕ್ಕೆ ಏರಲೇಬೇಕೆಂದು ಪಟ್ಟುಹಿಡಿದಿರುವ ಬಿಜೆಪಿ ತನ್ನ ಸರ್ವ ಬಲವನ್ನು ಪ್ರಯೋಗಕ್ಕಿಳಿಸಿ ಹೋರಾಡಿದೆ. 294 ಸ್ಥಾನಗಳ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ನಿಚ್ಚಳ ಬಹುಮತ ಪಡೆದುಕೊಂಡು ಸರ್ಕಾರ ರಚಿಸುವ ಗುರಿಯೊಂದಿಗೆ ಎರಡೂ ಪಕ್ಷಗಳು ಹೋರಾಡುತ್ತಿವೆ.
ಮೊದಲ ಹಂತದಲ್ಲಿ ದಾಖಲೆ ಪ್ರಮಾಣದಲ್ಲಿ ಮತದಾನವಾಗಿರುವುದು ಬಿಜೆಪಿಯ ಹುಮ್ಮಸ್ಸನ್ನು ಇಮ್ಮಡಿಗೊಳಿಸಿದೆ. ಎರಡನೇ ಹಂತದಲ್ಲೂ ಮತದಾರರಲ್ಲಿ ಇದೇ ಕಂಡು ಬರುತ್ತಿದೆ. ಜನರು ಬೆಳಬೆಳಗ್ಗೆಯೇ ಮತಗಟ್ಟೆಗಳಿಗೆ ಧಾವಿಸಿದ್ದು, ಉದ್ದನೆ ಸರತಿ ಸಾಲು ಕಂಡುಬರುತ್ತಿದೆ.

























