ಕಡಬ: ಅನುಮತಿ ಪಡೆಯದೆ ವ್ಯಕ್ತಿಯೊಬ್ಬರ ಖಾಸಗಿ ವಿಚಾರಗಳನ್ನು ಚಿತ್ರೀಕರಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿ ಅವಮಾನಿಸಿದ ಇಬ್ಬರು ಆರೋಪಿಗಳ ವಿರುದ್ಧ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೂರು ಗ್ರಾಮದ ನೆಲ್ಲಿಕಟ್ಟೆ ನಿವಾಸಿ ಪೂರ್ಣಜ್ಯೋತಿ ಅವರು ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.
ಪೂರ್ಣಜ್ಯೋತಿ ಅವರ ಮಗ ಪ್ರಭಾಕರ್ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎ. 3 ರಂದು ರಾತ್ರಿ ಸುಮಾರು 10 ಗಂಟೆ ಸುಮಾರಿಗೆ ಗಂಗಾಪ್ರಸನ್ನ ಎಂಬವರು ಪೂರ್ಣಜ್ಯೋತಿ ಅವರ ಮನೆಗೆ ಅಕ್ರಮವಾಗಿ ಪ್ರವೇಶಿಸಿ ಜಗಳ ಆರಂಭಿಸಿದ್ದಾರೆ. ಈ ವೇಳೆ ಪಕ್ಕದ ಮನೆಯ ರಾಮಚಂದ್ರ ಮತ್ತು ಅವರ ಪುತ್ರ ಅನುಷ್ ಈ ಘಟನೆಯನ್ನು ಚಿತ್ರೀಕರಣ ಮಾಡಿದ್ದಾರೆ.
ಹಾಗೆಯೇ ಪೂರ್ಣಜ್ಯೋತಿ ಮತ್ತು ಅವರ ಪುತ್ರನಿಗೆ ಅವಾಚ್ಯವಾಗಿ ಬೈದು, ಆ ಘಟನೆಯ ವಿಡಿಯೋವನ್ನು ಇತರರಿಗೂ ಹಂಚಿದ್ದಾರೆ. ಇದು ತಮ್ಮ ಕುಟುಂಬದ ಗೌರವಕ್ಕೆ ಧಕ್ಕೆ ತಂದಿದೆ. ಸಂತ್ರಸ್ತ ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

























