ವಿಧ್ವಂಸಕ ಕೃತ್ಯ ಎಸಗಿರುವ ಶಂಕೆ
ಚಂಡಿಗಢ : ಪಂಜಾಬ್ನ ಪಟಿಯಾಲದಲ್ಲಿ ಸೋಮವಾರ ತಡರಾತ್ರಿ ರೈಲು ಹಳಿಯಲ್ಲಿ ಸ್ಫೋಟ ಸಂಭವಿಸಿ ಹಳಿ ಹಾನಿಗೊಳಗಾಗಿದೆ. ಶಂಭು-ಅಂಬಾಲ ರೈಲು ಹಳಿಯಲ್ಲಿ ಸ್ಫೋಟದ ಸ್ಥಳದ ಬಳಿ ಒಂದು ಛಿದ್ರಗೊಂಡ ಮೃತದೇಹ ಪತ್ತೆಯಾಗಿದ್ದು, ತನಿಖೆ ಆರಂಭಿಸಲಾಗಿದೆ. ಈ ಸ್ಫೊಟದಿಂದಲೇ ವ್ಯಕ್ತರಿ ಛಿದ್ರವಾಗಿರಬೇಕೆಂದು ಸಂಶಯಿಸಲಾಗಿದೆ. ಆದರೆ ಸ್ಫೋಟಕ್ಕೆ ಕಾರಣವೇನೆಂದು ಸ್ಪಷ್ಟವಾಗಿಲ್ಲ. ಪೊಲೀಸರ ಪ್ರಕಾರ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ಸರಕು ರೈಲುಗಳಿಗೆ ಮೀಸಲಾಗಿರುವ ರೈಲ್ವೆ ಹಳಿಯ ಬಳಿ ಸ್ಫೋಟ ಸಂಭವಿಸಿದೆ.
ಸ್ಫೋಟದ ನಂತರ ಪೊಲೀಸ್ ಉಪ ಮಹಾನಿರ್ದೇಶಕ (ಡಿಐಜಿಪಿ) ಮತ್ತು ಪಟಿಯಾಲ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್ಎಸ್ಪಿ) ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದರು. ಸರ್ಕಾರಿ ರೈಲ್ವೆ ಪೊಲೀಸರು ಮತ್ತು ರೈಲ್ವೆ ರಕ್ಷಣಾ ಪಡೆ ತಂಡಗಳು ಕೂಡ ತನಿಖೆಗಾಗಿ ಸ್ಥಳಕ್ಕೆ ತಲುಪಿದವು. ವಿಧಿವಿಜ್ಞಾನ ತಜ್ಞರ ತಂಡವೂ ಮಾದರಿಗಳನ್ನು ಸಂಗ್ರಹಿಸಲು ಅಲ್ಲಿಗೆ ತಲುಪಿತ್ತು.
ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದೆ ಎಂದು ಪಟಿಯಾಲ ಎಸ್ಎಸ್ಪಿ ವರುಣ್ ಶರ್ಮಾ ಹೇಳಿದ್ದಾರೆ, ಹಳಿಗಳ ಬಳಿ ಪತ್ತೆಯಾದ ಶವದ ಬಗ್ಗೆ ಕೇಳಿದಾಗ, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು, ಆದರೆ ಶವವು ಛಿದ್ರಗೊಂಡ ಸ್ಥಿತಿಯಲ್ಲಿದೆ ಎಂದು ಹೇಳಿದರು.

























