ಬಿ.ಸಿ.ರೋಡ್ ನಾರಾಯಣಗುರು ವೃತ್ತದಿಂದ ಬ್ರಹ್ಮರಕೂಟ್ಲು ಟೋಲ್ಗೇಟ್ವರೆಗೆ ನಡಿಗೆ
ಮಂಗಳೂರು: ಇಲ್ಲಿನ ಬ್ರಹ್ಮರಕೊಟ್ಲು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರಿಗೆ ಕನಿಷ್ಠ ಮೂಲ ಸೌಕರ್ಯವನ್ನೂ ನೀಡದೆ 23 ವರ್ಷಗಳಿಂದ ಕಾನೂನುಬಾಹಿರವಾಗಿ ಸುಂಕ ವಸೂಲಿ ಮಾಡುತ್ತಿರುವ ಟೋಲ್ಗೇಟ್ ಮುಚ್ಚಲು ಆಗ್ರಹಿಸಿ ಇಂದು ಬೃಹತ್ ಜನಾಂದೋಲನ ನಡಿಗೆ ನಡೆಯಲಿದೆ. ಮಾಜಿ ಸಚಿವ ಹಾಗೂ ಟೋಲ್ಗೇಟ್ ತೆರವು ಹೋರಾಟ ಸಮಿತಿ ಗೌರವಾಧ್ಯಕ್ಷ ಬಿ.ರಮಾನಾಥ ರೈ ನೇತೃತ್ವದಲ್ಲಿ ಹೋರಾಟ ನಡೆಯಲಿದೆ.
ಗುರುಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಿ.ಸಿ. ರೋಡ್ ನಾರಾಯಣಗುರು ವೃತ್ತದಿಂದ ಬ್ರಹ್ಮರಕೂಟ್ಲು ಟೋಲ್ಗೇಟ್ವರೆಗೆ ಜನಾಂದೋಲನ ನಡಿಗೆ ನಡೆಯಲಿದ್ದು, ಈ ಹೋರಾಟದಲ್ಲಿ ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಕೇವಲ 28 ಕಿ.ಮೀ. ಅಂತರದಲ್ಲಿ ವಳಾಲು ಮತ್ತು ಬ್ರಹ್ಮರಕೂಟ್ಲು ಎಂಬಲ್ಲಿ ಎರಡು ಟೋಲ್ಗೇಟುಗಳನ್ನು ಸ್ಥಾಪಿಸಿರುವುದು ನಾಗರಿಕರನ್ನು ಸುಲಿಯುವ ಕಾರ್ಯತಂತ್ರವಾಗಿದೆ. ಹೆದ್ದಾರಿ ಇಲಾಖೆಯ ನಿಯಮದಂತೆ ಸೂಕ್ತ ಅಂತರದಲ್ಲಿ ಟೋಲ್ ಗೇಟು ಸ್ಥಾಪಿಸದೆ ಮನಸೊ ಇಚ್ಚೆಯಂತೆ ಟೋಲ್ಗೇಟುಗಳನ್ನು ಅಲ್ಲಲ್ಲಿ ಸ್ಥಾಪಿಸುವಂತಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದೆಂದು ಬಿ. ರಮಾನಾಥ ರೈ ಎಚ್ಚರಿಸಿದ್ದಾರೆ.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಎಚ್ಚೆತ್ತು ಈ ಟೋಲ್ ಸಂಗ್ರಹಕ್ಕೆ ಸಂಬಂಧಪಟ್ಟಂತೆ ನಿಯಮಾವಳಿ ಉಲ್ಲಂಘನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಕಾನೂನುಬಾಹಿರವಾಗಿ ಸುಂಕ ವಸೂಲಾತಿ ಶಾಶ್ವತ ಮುಚ್ಚುವ ತನಕ ಹೋರಾಟ ಮುಂದುವರಿಯಲಿದೆ ಎಂದು ಅವರು ಎಚ್ಚರಿಸಿದರು.

























