ಹೈಕೋರ್ಟ್ ಆದೇಶದಂತೆ ಮೇ 2ರಂದು ನಡೆಯಲಿದೆ ಮತಗಳ ಮರುಎಣಿಕೆ
ಬೆಂಗಳೂರು: ಶೃಂಗೇರಿ ವಿಧಾನಸಭೆ ಚುನಾವಣೆಯ ಅಂಚೆ ಮತಗಳ ಮರು ಎಣಿಕೆ ಚುನಾವಣೆ ನಡೆದ ಮೂರು ವರ್ಷಗಳ ಬಳಿಕ ನಡೆಯಲಿರುವುದು ರಾಜ್ಯಾದ್ಯಂತ ಕುತೂಹಲ ಮೂಡಿಸಿದೆ. ಹೈಕೋರ್ಟ್ ನಿರ್ದೇಶನ ಹಿನ್ನೆಲೆಯಲ್ಲಿ ಶೃಂಗೇರಿ ವಿಧಾನಸಭಾ ಚುನಾವಣೆಯ ಅಂಚೆ ಮತಗಳ ಮರು ಎಣಿಕೆ ಕಾರ್ಯ ಮೇ 2ರಂದು ಐಡಿಎಸ್ಜಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದೆ.
ಕಾಲೇಜು ಆವರಣದಲ್ಲಿ ಮರುಎಣಿಕೆ ಪ್ರಕ್ರಿಯೆಗೆ ಜಿಲ್ಲಾಡಳಿತ ಸಮಗ್ರ ವ್ಯವಸ್ಥೆ ಮಾಡಿಕೊಂಡಿದೆ. ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಾರಂಭವಾಗಲಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಗೌರವ್ ಶೆಟ್ಟಿ ಅವರನ್ನು ಚುನಾವಣಾಧಿಕಾರಿಯಾಗಿ ನೇಮಿಸಲಾಗಿದ್ದು, ನಾಲ್ವರು ಸಹಾಯಕ ಚುನಾವಣಾಧಿಕಾರಿಗಳು ಸಹ ಕಾರ್ಯನಿರ್ವಹಿಸಲಿದ್ದಾರೆ. ಮರುಎಣಿಕೆ ನಡೆಯುವ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಪಾರದರ್ಶಕತೆಯನ್ನು ಖಚಿತಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಮರುಎಣಿಕೆಗೆ ತಡೆ ಕೋರುವ ಗಡುವು ಏಪ್ರಿಲ್ 20 ರಂದು ಮುಗಿದಿದ್ದರಿಂದ ಮೇ 2ರಂದು ಮರು ಎಣಿಕೆ ನಡೆಸಲು ಹೈಕೋರ್ಟ್ ಆದೇಶಿಸಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಟಿ.ಡಿ.ರಾಜೇ ಗೌಡ ಕೇವಲ 201 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಒಟ್ಟು 2,811 ಪೋಸ್ಟಲ್ ಮತಗಳಲ್ಲಿ 279 ಮತಗಳು ಅಮಾನ್ಯಗೊಂಡಿದ್ದವು. ಈ ಫಲಿತಾಂಶದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದ ಎದುರಾಳಿ ಡಿ.ಎನ್.ಜೀವರಾಜ್ ಅವರು ಮರುಎಣಿಕೆಗೆ ಮನವಿ ಸಲ್ಲಿಸಿದ್ದರು. ಆದರೆ ಜಿಲ್ಲಾ ಚುನಾವಣಾಧಿಕಾರಿ ಅದನ್ನು ಪರಿಗಣಿಸದೆ ಫಲಿತಾಂಶವನ್ನು ಘೋಷಿಸಿದ್ದರು. ನಂತರ ಅವರು ಕೋರ್ಟ್ ಮೆಟ್ಟಿಲೇರಿದ್ದರು.

























