ಮಹಿಳೆಯ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆಯಾಗಿದ್ದ ಅಪರಾಧಿ
ಕಡಬ : ಸಾರ್ವಜನಿಕ ರಸ್ತೆಯ ಸಮೀಪ ಮೋರಿಯ ಅಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೋರ್ವರ ಮೃತದೇಹ ಪತ್ತೆಯಾದ ಪ್ರರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ಪ್ರಕಟವಾದ ಬಳಿಕ ತಲೆಮರೆಸಿಕೊಂಡಿದ್ದ ಕುಖ್ಯಾತ ಅಪರಾಧಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುಳ್ಯ ಅಜ್ಜಾವರ ನಿವಾಸಿ ಎನ್.ಎಂ.ಅಬ್ದುಲ್ ಅಜೀಜ್ (30) ಬಂಧಿತ ಆರೋಪಿ.
2012ರ ಜನವರಿ 31ರಂದು ಕಡಬ ಠಾಣಾ ವ್ಯಾಪ್ತಿಯ ಪುತ್ತೂರು, ಕೊಂಬಾರು ಗ್ರಾಮದ ಅಮೈತಡ್ಕ ಎಂಬಲ್ಲಿ ಸಾರ್ವಜನಿಕ ರಸ್ತೆಯ ಸಮೀಪ ಮೋರಿಯ ಅಡಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯೋರ್ವರ ಮೃತದೇಹ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಕಡಬ ಪೊಲೀಸ್ ಠಾಣೆಯಲ್ಲಿ ಅ. ಕ್ರ : 15/2012, ಕಲಂ : 302.201 R/W 34 ಐ.ಪಿ.ಸಿ ಪ್ರಕರಣ ದಾಖಲಿಸಲಾಗಿತ್ತು.
ತನಿಖೆ ನಡೆಸಿದ ಆಗಿನ ತನಿಖಾಧಿಕಾರಿ ಎಂ.ಎನ್ ಅನುಚೇತ್ ಆರೋಪಿ ಅಬ್ದುಲ್ ಅಜೀಜ್ ವಿರುದ್ಧ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ಉಚ್ಚ ನ್ಯಾಯಾಲಯದ ದ್ವಿಸದಸ್ಯ ಪೀಠದ ನ್ಯಾಯಾಧೀಶರಾದ ಶ್ರೀನಿವಾಸ್ ಹರೀಶ್ ಕುಮಾರ್ ಹಾಗೂ ವಿಜಯ್ ಕುಮಾರ್ ಎ ಪಾಟೀಲ್ ನಡೆಸಿದ್ದರು.
ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ, ಆರೋಪಿಗೆ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 2,00,000 ರೂ. ದಂಡ ಪಾವತಿಸುವಂತೆ ನ್ಯಾಯಾಲಯ ತೀರ್ಪು ನೀಡಿತ್ತು. ಅಪರಾಧಿ ಶಿಕ್ಷೆ ಪ್ರಕಟವಾದ ಬಳಿಕ ತಲೆಮರೆಸಿಕೊಂಡಿದ್ದನು. ಇದೀಗ ಆತನನ್ನು ಕಡಬ ಪೊಲೀಸ್ ಉಪನೀರಿಕ್ಷಕರಾದ ಜಂಬುರಾಜ್ ಮಹಾಜನ್ ಮತ್ತು ಠಾಣಾ ಸಿಬ್ಬಂದಿಗಳು ಆಂಧ್ರ ಪ್ರದೇಶದಲ್ಲಿ ದಸ್ತಗಿರಿ ಮಾಡಿ ಏ.25ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

























