ಜನಿವಾರ ತೆಗೆಸಿದ ಪ್ರಕರಣ : ಕಾಲೇಜಿಗೆ 25 ಲ.ರೂ. ದಂಡ ಹಾಕಲು ಒತ್ತಾಯ

ಸಿಇಟಿ ಪರೀಕ್ಷೆ ವೇಳೆ ವಿದಾರ್ಥಿಗಳ ಜನಿವಾರ ತೆಗೆಸಿದ ಕಾಲೇಜು ಸಿಬ್ಬಂದಿ

ಬೆಂಗಳೂರು: ಬೆಂಗಳೂರಿನ ಕಾಲೇಜೊಂದರಲ್ಲಿ ಸಿಇಟಿ ಪರೀಕ್ಷೆ ವೇಳೆ ಆನಂದ್ ಸುಧೀರ್ ರಾವ್ ಸೇರಿದಂತೆ ಐದಕ್ಕೂ ಹೆಚ್ಚು ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಘಟನೆಗೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಕ್ರೋಶ ವ್ಯಕ್ತಪಿಸಿದ್ದು, ಮುಖ್ಯಮಂತ್ರಿಗೆ ಈ ಕುರಿತು ಪತ್ರ ಬರೆದು ಜನಿವಾರ ತೆಗೆಸಿದ ಕಾಲೇಜಿನ ಪರವಾನಗಿ ರದ್ದುಪಡಿಸುವಂತೆ ಆಗ್ರಹಿಸಿದೆ. ಜೊತೆಗೆ ಸಂಬಂಧಿಸಿದ ಸಂಸ್ಥೆಗೆ ಕನಿಷ್ಠ 25 ಲಕ್ಷ ರೂ. ದಂಡ ವಿಧಿಸಬೇಕೆಂದು ಒತ್ತಾಯಿಸಿದೆ.

ಸಿಇಟಿ ಪರೀಕ್ಷಾರ್ಥಿಗಳ ಜನಿವಾರ ತೆಗೆಸಲು ನಿಯಮ ಇಲ್ಲದಿದ್ದರೂ ತೆಗೆಸಿದ್ದಾರೆ. ಈ ಬೆನ್ನಲ್ಲೇ ಮಡಿವಾಳ ಠಾಣೆಯ ಪೊಲೀಸರು ಮೂವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಾಸಭಾ ಅಧ್ಯಕ್ಷ ಎಸ್. ರಘುನಾಥ್, ಈ ಘಟನೆ ಅತ್ಯಂತ ದುರದೃಷ್ಟಕರ ಮತ್ತು ಖಂಡನೀಯ. ಜನಿವಾರ ತೆಗೆಸಿದ ಪರಿಣಾಮ ವಿದ್ಯಾರ್ಥಿಗಳು ಮತ್ತು ಪೋಷಕರು ಮಾನಸಿಕವಾಗಿ ನೊಂದಿದ್ದಾರೆ ಎಂದಿದ್ದಾರೆ.























































 
 

ಕಳೆದ ವರ್ಷವೂ ಇಂತಹ ಘಟನೆ ನಡೆದಾಗ ಮಹಾಸಭಾ ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು ಎಂದು ರಘುನಾಥ್ ತಿಳಿಸಿದ್ದಾರೆ. 2025ರ ಡಿಸೆಂಬರ್‌ನಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳುವುದಾಗಿ ಸರ್ಕಾರ ಭರವಸೆ ನೀಡಿದ್ದರೂ ಇದೀಗ ಮತ್ತೆ ಇದೇ ರೀತಿಯ ಘಟನೆ ನಡೆದಿದೆ. ಈ ಘಟನೆ ಬ್ರಾಹ್ಮಣ ಸಮುದಾಯದ ಮೇಲಿನ ಅತಿಕ್ರಮಣ ಎಂದು ಮಹಾಸಭಾ ಅಭಿಪ್ರಾಯಪಟ್ಟಿದೆ.

ಚಿಕ್ಕಬಳ್ಳಾಪುರದಲ್ಲಿಯೂ ಇಂತಹದ್ದೇ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಅಲ್ಲಿ ಸಹ ಹೋರಾಟ ನಡೆಯುತ್ತಿದೆ ಎಂದು ರಘುನಾಥ್ ತಿಳಿಸಿದ್ದಾರೆ. ಪ್ರಕರಣದ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಲು ವಿಳಂಬವಾಗುತ್ತಿದೆ ಎಂಬ ಅಸಮಾಧಾನವೂ ವ್ಯಕ್ತವಾಗಿದೆ. ಈ ಘಟನೆಗೆ ನ್ಯಾಯ ದೊರಕುವವರೆಗೆ ಹೋರಾಟ ಮುಂದುವರೆಯಲಿದೆ ಎಂದು ಮಹಾಸಭಾ ಎಚ್ಚರಿಕೆ ನೀಡಿದೆ.

error: Content is protected !!
Scroll to Top