ಕಡಬ : ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಇಚಿಲಂಪಾಡಿ ಗ್ರಾಮದಲ್ಲಿ ಸಾಯುವ ಕುರಿತಾಗಿ ವಾಟ್ಸ್ಯಾಪ್ ಸ್ಟೇಟಸ್ ಹಾಕಿ ಬಳಿಕ ಮರವೊಂದಕ್ಕೆ ನೇಣು ಬಿಗಿದು ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾ. 31 ರಂದು ಸಂಭವಿಸಿದೆ. ರೆನೀಶ್ (27) ಎಂಬಾತನೇ ಮೃತ ಯುವಕ.
ಮೃತ ರೆನೀಶ್ ತಂದೆ ತಾಯಿ ಮರಣ ಹೊಂದಿದ್ದು, ಇವನ ತಮ್ಮ ಕಳೆದ ಮೂರು ವರ್ಷದ ಹಿಂದೆ ಮಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ರೆನೀಶ್ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದು, ವಿದ್ಯುತ್ ಲೈನ್ ನ ಕೆಲಸಕ್ಕೆ ಹೋಗುತ್ತಿದ್ದ. ಒಬ್ಬಂಟಿಯಾಗಿದ್ದರಿಂದ ಮಾನಸಿಕವಾಗಿಯೂ ನೊಂದಿದ್ದ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ನೆಲ್ಯಾಡಿ ಹೊರಠಾಣೆಯ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
























