ಪುತ್ತೂರು: ಸಂತ ಫಿಲೋಮಿನಾ ಕಾಲೇಜಿನ ಯಕ್ಷ ಕಲಾಕೇಂದ್ರ ಹಾಗೂ ಆಂತರಿಕ ಗುಣಮಟ್ಟ ಭರವಸೆ ಕೋಶಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸ್ಪಂದನ ಸಭಾಂಗಣದಲ್ಲಿ ವಿಶ್ವ ರಂಗಭೂಮಿ ದಿನವನ್ನು ಆಚರಿಸಲಾಯಿತು.
ಕಾಲೇಜಿನ ಉಪಪ್ರಾಂಶುಪಾಲ ಡಾ| ಎ ಪಿ ರಾಧಾಕೃಷ್ಣ ಮುಖ್ಯ ಅತಿಥಿಯಾಗಿ ವಿದ್ಯಾರ್ಥಿಗಳಿಗೆ ಯಕ್ಷಗಾನ ಹಾಗೂ ರಂಗಭೂಮಿಯ ಮಹತ್ವವನ್ನು ತಿಳಿಸಿ ತಮ್ಮ ಜೀವನದಲ್ಲಿ ಅವು ಬೀರಿದ ಪ್ರಭಾವವನ್ನು ವಿವರಿಸಿದರು.
ಕಾಲೇಜಿನ ಪ್ರಾಂಶುಪಾ ವಂ| ಡಾ ಆಂಟನಿ ಪ್ರಕಾಶ್ ಮೊಂತೆರೋ ಅಧ್ಯಕ್ಷತೆ ವಹಿಸಿ ನಾಟಕ ಹಾಗೂ ರಂಗಭೂಮಿ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಸಮಾಜದ ಅಭಿವೃದ್ಧಿಗೆ ರಂಗಭೂಮಿಯ ಕೊಡುಗೆ ಬಹಳಷ್ಟಿದೆ. ರಂಗಕಲೆಯ ಮೂಲಕ ಜನಸಾಮಾನ್ಯರಿಗೆ ಪುರಾಣಗಳ ಬಗ್ಗೆ, ಸಾಮಾಜಿಕ ಸಮಸ್ಯೆಗಳು ಮತ್ತು ಪಿಡುಗುಗಳ ಬಗ್ಗೆ ಅರಿವುಮೂಡಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಚಲನಚಿತ್ರಗಳಿಗೆ ಸಿಗುವ ಮಹತ್ವವು ನಾಟಕಗಳಿಗೆ ಸಿಗುತ್ತಿಲ್ಲ. ರಂಗಕಲೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ವಿದ್ಯಾರ್ಥಿನಿ ಸಮೃದ್ಧಿ ಶೆಣೈ ರಂಗಗೀತೆ ಹಾಡಿದರು. ಅಭಿಜ್ಞಾ ಮತ್ತು ಬಳಗದವರು ಪ್ರಾರ್ಥಿಸಿದರು. ಕಾಲೇಜಿನ ಯಕ್ಷಕಲಾ ಕೇಂದ್ರದ ಸಂಯೋಜಕ ಪ್ರಾಶಾಂತ್ ರೈ ಸ್ವಾಗತಿಸಿ, ವಂದಿಸಿದರು. ಸುಧನ್ವ ಶ್ಯಾಮ್ ಕಾರ್ಯಕ್ರಮ ನಿರೂಪಿಸಿದರು. ಯಕ್ಷಕಲಾಕೇಂದ್ರದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.