ಸುಳ್ಯ: ಐವರ್ನಾಡಿನಲ್ಲಿ ಅಪರಿಚಿತ ವ್ಯಕ್ತಿಗಳು ಕಾರಿನ ಚಾಲಕನಿಗೆ ಖಾರದ ಪುಡಿ ಎರಚಿ ಸುಲಿಗೆಗೆ ಯತ್ನಿಸಿದ ಘಟನೆ ಶುಕ್ರವಾರ ರಾತ್ರಿ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತಮಿಳುನಾಡಿನ ಗುಡಲೂರು ನೀಲಗಿರಿಯ ಅರುಣ್ ಕುಮಾರ್ ಎಂಬವರು ತಮಿಳುನಾಡಿನಿಂದ ಮೈಸೂರು ಆಗಿ ಸುಳ್ಯ ಕಡೆಯಿಂದ ಬೆಳ್ಳಾರೆ ಮಾರ್ಗವಾಗಿ ಮರ್ಧಾಳಕ್ಕೆ ಹೋಗುವಾಗ ರಾತ್ರಿ 12 ಗಂಟೆ ಸಮಯಕ್ಕೆ ಐವರ್ನಾಡು ಗ್ರಾಮದ ಪುತ್ತಿಲ ಸಮೀಪ ತಿರುವಿನಲ್ಲಿ ಮೂತ್ರ ವಿಸರ್ಜನೆಗೆ ಕಾರು ನಿಲ್ಲಿಸಿದರು.
ಬಳಿಕ ಕಾರಿನ ಹತ್ತಿರ ಬಂದಾಗ ದೂರದಿಂದ ವಿಶಲ್ ಹಾಕಿದ ಶಬ್ದ ಕೇಳಿದ್ದು ಈ ವೇಳೆ ಕಾರಿನ ಮೇಲೆ ಕಲ್ಲು ಎಸೆದಿದ್ದಾರೆ. ಕಲ್ಲು ಕಾರಿನ ಗ್ಲಾಸಿಗೆ ಬಿದ್ದಿದ್ದು ಕಾರಿನ ಮುಂದಿನ ಗ್ಲಾಸ್ ಬಿರುಕುಬಿಟ್ಟಿದೆ. ಈ ವೇಳೆ ಕಾರನ್ನು ಮುಂದೆ ಚಲಾಯಿಸಲು ಪ್ರಯತ್ನಿಸಿದಾಗ ಬೈಕಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅರುಣ್ ಅವರ ಶರ್ಟ್ ಕಾಲರ್ ಹಿಡಿದೆಳೆದು ಮುಖದ ಮೇಲೆ ಖಾರದ ಪುಡಿ ಎರಚಿದ್ದು ಅರುಣ್ ತಪ್ಪಿಸಿಕೊಂಡು ಮುಂದೆ ಹೋಗಿ ರಸ್ತೆ ಬದಿ ಇದ್ದವರಲ್ಲಿ ಘಟನೆಯ ಬಗ್ಗೆ ತಿಳಿಸಿದ್ದಾರೆ.
ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿ ಅಪರಿಚಿತರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಅರುಣ್ ಕುಮಾರ್ ಅವರು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

























