ಕಡಬ: ತಂದೆಯ ಧಾರ್ಮಿಕ ಹಾದಿಯನ್ನು ಅನುಸರಿಸುತ್ತಿರುವ ಪುತ್ರನೊಬ್ಬ ಅವರ ನೆನಪಿಗಾಗಿ ಕಡಬದ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಅಭಿವೃದ್ಧಿ ಕಾರ್ಯಕ್ಕೆ ಸುಮಾರು 7 ಲಕ್ಷ ರೂ. ಗಳನ್ನು ಸೇವಾ ರೂಪದಲ್ಲಿ ನೀಡಿ ಮಾದರಿಯಾಗಿದ್ದಾರೆ.
ಕಡಬ ಮೂಲದ, ಮಂಗಳೂರಿನಲ್ಲಿ ಉದ್ಯಮ ನಡೆಸುತ್ತಿರುವ ಪ್ರಸಾದ್ ಎನ್. ಕೆ. ಅವರೇ ತಮ್ಮ ತಂದೆ ದಿ. ನಾರಾಯಣ ಭಂಡಾರಿ ಅವರ ಸ್ಮರಣಾರ್ಥ ದೇಗುಲಾಭಿವೃದ್ಧಿಗೆ ದೇಣಿಗೆ ನೀಡಿದವರು.
ದೇಗುಲದ ಪಾಕಶಾಲೆಯ ಪುನರ್ನಿರ್ಮಾಣ ಹಾಗೂ ಕೈ ತೊಳೆಯುವ ವ್ಯವಸ್ಥೆಯ ಕೆಲಸಗಳು ಸಾಗುತ್ತಿದ್ದು, ಇದಕ್ಕೆ ತಗುಲುವ ಸುಮಾರು 7 ಲಕ್ಷ ರೂ. ಗಳನ್ನು ಅವರು ದೇಗುಲಕ್ಕೆ ಸಮರ್ಪಣೆ ಮಾಡಿದ್ದಾರೆ. ತಮ್ಮ ತಂದೆಯವರಿಗೆ ದೇವಾಲಯದ ಮೇಲಿದ್ದ ಕಾಳಜಿ, ಭಕ್ತಿ, ಸಮಾಜ ಸೇವಾ ಮನೋಭಾವವನ್ನು ಅವರ ನಂತರವೂ ಜೀವಂತವಾಗಿರಿಸುವ ದೃಷ್ಟಿಯಿಂದ ಪ್ರಸಾದ್ ಅವರು ಈ ಸೇವಾ ಸಮರ್ಪಣೆ ಮಾಡಿದ್ದು, ಆ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ.

























