ಚಿಕ್ಕಮಗಳೂರು: ಮೃತ ಪತಿಯ ಶವದ ಜೊತೆಗೆ ಮಾನಸಿಕ ಅಸ್ವಸ್ಥ ಪತ್ನಿಯೊಬ್ಬರು ಹತ್ತು ದಿನಗಳನ್ನು ಕಳೆದ ಮನ ಕಲಕುವ ಘಟನೆ ಬಣಕಲ್‌ನಲ್ಲಿ ನಡೆದಿದೆ.
ಸುಭಾಶ್ ನಗರದ ಸಿರಿಲ್ ಮೋನಿಸ್(77) ಅವರು ಮೃತರು. ಅವರ ಪತ್ನಿ ಸಿಸಿಲ್ ಮಾನಸಿಕ ಅಸ್ವಸ್ಥರಾಗಿದ್ದು ಪತಿಯ ಶವದ ಜೊತೆಗೆ ಹತ್ತು ದಿನಗಳ ಕಾಲ ಕಳೆದಿದ್ದಾರೆ.
ಅವರ ಪುತ್ರ ಮೆಲ್ವಿನ್ ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಪುತ್ರಿ ದುಬೈನಲ್ಲಿ ಶಿಕ್ಷಕಿಯಾಗಿದ್ದಾರೆ. ಸಿರಿಲ್ ಅವರಿಗೆ ಆರೋಗ್ಯ ಸಮಸ್ಯೆ ಇದ್ದು, ಅವರಿಗೆ ಚಿಕಿತ್ಸೆ ಕೊಡಿಸಿ ಕೆಲ ದಿನಗಳ ಹಿಂದಷ್ಟೇ ಪುತ್ರ ಬೆಂಗಳೂರಿಗೆ ಮರಳಿದ್ದರು. ಮಕ್ಕಳು ಫೋನ್ ಮೂಲಕ ಅವರ ಆರೋಗ್ಯ ವಿಚಾರಿಸಿಕೊಳ್ಳುತ್ತಿದ್ದರು.
ಇತ್ತೀಚೆಗೂ ಅವರು ಕರೆ ಮಾಡುತ್ತಿದ್ದು ತಾಯಿಯ ಬಳಿ ತಂದೆಯ ಆರೋಗ್ಯದ ಬಗ್ಗೆ ಕೇಳುತ್ತಿದ್ದರು. ಆಗೆಲ್ಲಾ ಅವರು ಆರೋಗ್ಯವಾಗಿದ್ದಾರೆ ಎಂದು ತಾಯಿ ಹೇಳಿದ ಮಾತು ನಂಬಿ ಅವರು ಸುಮ್ಮನಾಗಿದ್ದರು. ತಂದೆಯ ಆರೋಗ್ಯ ಸ್ಥಿತಿ ತಿಳಿಯಲು ಪುತ್ರ ತನ್ನ ಸ್ನೇಹಿತನನ್ನು ಮನೆಗೆ ಕಳುಹಿಸಿದ ಸಂದರ್ಭದಲ್ಲಿ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಮೃತದೇಹ ಕೊಳೆತ ವಾಸನೆ ಬಂದಿದ್ದರಿಂದ ಅಕ್ಕಪಕ್ಕದವರು ಪರಿಶೀಲನೆಗೆ ಮುಂದಾಗಿದ್ದಾರೆ. ಕೊನೆಗೆ ಸಾಮಾಜಿಕ ಕಾರ್ಯಕರ್ತ ಆರಿಫ್ ನೆರವಿನೊಂದಿಗೆ ಪೊಲೀಸರ ನೇತೃತ್ವದಲ್ಲಿ ಶವ ಪರೀಕ್ಷೆ ನಡೆಸಿ ಬಣಕಲ್ ಕ್ರೈಸ್ತರ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ.

























