ಬೀದರ್: ಔರಾದ್ ತಾಲೂಕಿನ ಧರಿ ಹನುಮಾನ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು ವ್ಯಕ್ತಿಯೊಬ್ಬ ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ನಡೆದಿದೆ.
ಔರಾದ್ ತಾಲೂಕಿನ ಚಟ್ನಾಳ ಗ್ರಾಮದ ಸಂಗಮೇಶ ಕೂಡ್ಲೆ (40) ಮೃತಪಟ್ಟ ದುರ್ದೈವಿ.
ಜಾತ್ರೆಗೆ ತೆರಳಿ ಊರಿಗೆ ಹಿಂದಿರುಗುವಾಗ ಟಾಟಾ ಮ್ಯಾಜಿಕ್ ವಾಹನಕ್ಕೆ ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ವಾಹನದಲ್ಲಿದ್ದ ಸಂಗಮೇಶ ತೀವ್ರ ಗಾಯಗೊಂಡಿದ್ದು, ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಚಂದ್ರಕಾಂತ ಮುಚಳಂಬೆ, ಸಂಜುಕುಮಾರ ತೊಗರಗೆ, ಗುಂಡಮ್ಮ ದುಬಲಗುಂಡೆ ಅವರಿಗೆ ಗಾಯಗಳಾಗಿದ್ದು, ಬೀದರ್ ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೀದರ ತಾಲೂಕಿನ ಅಲಿಯಂಬರ್ ಗ್ರಾಮದಲ್ಲಿ ಬುಧವಾರ ಜರುಗಿದ ಜಾತ್ರೆಗೆ ಟಾಟಾ ಮ್ಯಾಜಿಕ್ ವಾಹನದಲ್ಲಿ ಇವರೆಲ್ಲಾ ತೆರಳಿದ್ದರು. ದೇವರ ದರ್ಶನ ಮುಗಿಸಿಕೊಂಡು ಗ್ರಾಮಕ್ಕೆ ಮರಳುವಾಗ ಈ ದುರ್ಘಟನೆ ಸಂಭವಿಸಿದೆ. ಟಿಪ್ಪರ್ ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎನ್ನಲಾಗಿದೆ. ಚಾಲಕ ವಾಹನ ಸಮೇತ ಅಲ್ಲಿಂದ ಓಡಿ ಹೋಗಿದ್ದಾನೆ. ಡಿಕ್ಕಿಯ ರಭಸಕ್ಕೆ ಟಾಟಾ ಮ್ಯಾಜಿಕ್ ವಾಹನ ಪಲ್ಟಿಯಾಗಿ ನಜ್ಜುಗುಜ್ಜಾಗಿದೆ.
ಸಂತಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

























