ಬೆಂಗಳೂರು:ಹಲವು ಶತಮಾನಗಳ ಇತಿಹಾಸ ಹೊಂದಿರುವ ಯಕ್ಷಗಾನ ಕಲೆಯನ್ನು ನೂರಾರು ಕಲಾವಿದರು ಪ್ರಸಂಗಕರ್ತರ ಆಶಯದಂತೆ ರಂಗದಲ್ಲಿ ಪ್ರದರ್ಶಿಸಿ ಜನಸಾಮಾನ್ಯರಿಗೆ ಪೌರಾಣಿಕ ಜ್ಞಾನವನ್ನು ನೀಡಿದ್ದಾರೆ. ಭಾರತೀಯ ರಂಗಭೂಮಿಯಲ್ಲಿ ವಿಶಿಷ್ಟ ಕಲಾ ಪ್ರಕಾರವೆನಿಸಿದ ಯಕ್ಷಗಾನಕ್ಕೆ ಶೈಕ್ಷಣಿಕ ಚೌಕಟ್ಟನ್ನು ನೀಡುವ ಪ್ರಯತ್ನ ನಡೆದಿದೆಯಾದರೂ ಅದಕ್ಕೊಂದು ಅಂತಿಮ ರೂಪವನ್ನು ಬೆಂಗಳೂರಿನ ಕಲಾಕದಂಬ ಆರ್ಟ್ ಸೆಂಟರ್ ಮಾಡಿರುವುದು ಯಕ್ಷಗಾನದ ಇತಿಹಾಸದಲ್ಲಿ ದಾಖಲಾಗುವ ಘಟನೆಯೆಂದು ಮೈಸೂರಿನ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ನಿಕಟಪೂರ್ವ ಕುಲಪತಿ ಪ್ರೊ. ನಾಗೇಶ್ ವಿ. ಬೆಟ್ಟಕೋಟೆ ತಿಳಿಸಿದರು.
ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಯಕ್ಷಗಾನ ಸರ್ಟಿಫಿಕೇಟ್ ಮತ್ತು ಡಿಪ್ಲೋಮಾ ಕೋರ್ಸು ಪರೀಕ್ಷೆಗಳಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಬೆಂಗಳೂರಿನ ಬಿ.ಎಂ. ಶ್ರೀ ಕಲಾಭವನದಲ್ಲಿ ಜರಗಿದ ಪದವಿ ಪ್ರಮಾಣ ಪತ್ರ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಯಕ್ಷಗಾನದಲ್ಲಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್ಗಳನ್ನು ಆರಂಭಿಸುವ ಬಗ್ಗೆ ಮತ್ತು ಯಕ್ಷಗಾನಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡುವ ಬಗ್ಗೆ ಸರಕಾರದೊಂದಿಗೆ ಯಕ್ಷಗಾನದ ವಿದ್ವಾಂಸರು ಕಲಾವಿದರು ಸಂವಾದವನ್ನು ನಡೆಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು ಶೀಘ್ರವೇ ಶಾಸ್ತ್ರೀಯ ಸ್ಥಾನಮಾನ ಸಿಗುವ ಭರವಸೆ ಇದೆ ಎಂದರು. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸ್ಥಳೀಯ ಕಲಾ ಪ್ರಕಾರಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದು ಯಕ್ಷಗಾನ ಪದವಿ ಪಡೆದವರು ಈ ಕಲೆಯನ್ನು ಸಾಂಪ್ರದಾಯಕವಾಗಿ ಬೆಳೆಸಿ ಪ್ರಚಾರಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.
ಡಾ. ಗಂಗೂಬಾಯಿ ಹಾನಗಲ್ ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಕೆ. ರಾಮಕೃಷ್ಣಯ್ಯ ಪದವಿ ಪ್ರದಾನ ಮಾಡಿ ಕಲಾಕದಂಬ ಆರ್ಟ್ ಸೆಂಟರ್ ಪ್ರಯತ್ನವನ್ನು ಶ್ಲಾಘಿಸಿ ವಿಶ್ವವಿದ್ಯಾನಿಲಯದಿಂದ ಸರ್ವ ರೀತಿಯ ಪ್ರೋತ್ಸಾಹವನ್ನು ಯಕ್ಷಗಾನ ಕಲೆಗೆ ನೀಡುವುದಾಗಿ ತಿಳಿಸಿದರು.
ಪ್ರಥಮ ಬಾರಿಗೆ ಯಕ್ಷಗಾನ ಸರ್ಟಿಫಿಕೇಟ್ ಮತ್ತು ಡಿಪ್ಲೋಮಾ ಪದವಿ ಪಡೆದ ವಿದ್ಯಾರ್ಥಿಗಳ ಪರವಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ದಿವಾಕರ ಆಚಾರ್ಯ ಗೇರುಕಟ್ಟೆ ಅನಿಸಿಕೆಗಳನ್ನು ವ್ಯಕ್ತಪಡಿಸಿದರು
ಕೃತಿ ಬಿಡುಗಡೆ: ಯಕ್ಷ ವಾಹಿನಿ ಬೆಂಗಳೂರು ಸಂಯೋಜನೆಯಲ್ಲಿ ಕನ್ನಡದ ಸಾಹಿತಿಗಳಿಂದ 25 ಯಕ್ಷ ಪ್ರಸಂಗಗಳ ಅವಲೋಕನ ‘ಯಕ್ಷ ಸಾಹಿತ್ಯ ಸಾಂಗತ್ಯ’
ಕೃತಿಯನ್ನು ಬಿ .ಎಂ. ಶ್ರೀ ಪ್ರತಿಷ್ಠಾನದ ಗೌರವ ಅಧ್ಯಕ್ಷ ಡಾ. ಆರ್. ಲಕ್ಷ್ಮೀನಾರಾಯಣ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರುಯಕ್ಷಗಾನ ಪ್ರದರ್ಶನಕ್ಕೆ ಪ್ರಸಂಗವೇ ಆಧಾರವಾಗಿದ್ದು ಕವಿಯ ಆಶಯವನ್ನು ಅಂಗಿಕ, ಅಭಿನಯ, ವಾಚಿಕ ಮತ್ತು ಆಹಾರ್ಯದ ಮೂಲಕ ಅಭಿವ್ಯಕ್ತಿಗೊಳಿಸುವ ಅಂಶಗಳು ಕೃತಿಯಲ್ಲಿ ಮೂಡಿಬಂದಿದ್ದು ಪ್ರಸಂಗ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಮನ್ನಣೆ ಪಡೆಯಲು ಈ ಕೃತಿಯಿಂದ ಸಾಧ್ಯವಾಗಲಿದೆ ಎಂದರು.
ಯಕ್ಷಗಾನ ವಿದ್ವಾಂಸರು, ಕೃತಿಯ ಸಂಪಾದಕ ಡಾ. ಆನಂದರಾಮ ಉಪಾಧ್ಯ ಮತ್ತು ಫಣಿಗಿರಿ ಪ್ರತಿಷ್ಠಾನದ ಅಧ್ಯಕ್ಷ ಉಮೇಶ ಶಿರೂರು ಮಾತನಾಡಿ ಹಲವು ಅನನ್ಯತೆಗಳಿಂದ ಕೂಡಿದ ಈ ಸಮಾರಂಭವು ಅರ್ಥಪೂರ್ಣವಾಗಿ ನಡೆದ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ಯಕ್ಷವಾಹಿನಿಯ ಸಂಸ್ಥಾಪಕ ವಿಶ್ವಸ್ಥ ರವಿ ಮಡೋಡಿ ನಾಲ್ಕು ವರ್ಷಗಳಿಂದ ಸಾಹಿತಿಗಳೊಂದಿಗೆ ಜರಗಿದ ಪ್ರಸಂಗ ಸಾಹಿತ್ಯ ಸಂವಾದ ಕೃತಿರೂಪದಲ್ಲಿ ಬಂದಿರುವುದು ಹೊಸ ಚಿಂತನೆಗೆ ದಾರಿ ಮಾಡಿಕೊಟ್ಟಿದೆ ಎಂದರು.
ಕಲಾಕದಂಬ ಆರ್ಟ್ ಸೆಂಟರ್ನ ನಿರ್ದೇಶಕ ಡಾ. ರಾಧಾಕೃಷ್ಣ ಉರಾಳ ಪ್ರಸ್ತಾವನೆಗೈದರು. ಕಾರ್ಯದರ್ಶಿ ಮುರಲೀಧರ ನಾವಡ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಆರಂಭದಲ್ಲಿ ಪುಣ್ಯಕೋಟಿ ಯಕ್ಷಗಾನ ನೃತ್ಯ ರೂಪಕವನ್ನು ಭೂಮಿಕಾ, ಪೃಥ್ವಿ ಗೌಡ ಮತ್ತು ಹರ್ಷಿತ ಪ್ರಸ್ತುತಪಡಿಸಿದರು. ಯಕ್ಷ ಸಾಹಿತ್ಯ ಸಾಂಗತ್ಯ ಕೃತಿಯ ಪ್ರಕಾಶಕರಾದ ಸಾಹಿತ್ಯ ಲೋಕ ಪಬ್ಲಿಕೇಶನ್ ಅವರಿಂದ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯಿತ್ತು.

























