ಇಸ್ರೇಲ್ ದಾಳಿಯಲ್ಲಿ ಗಾಯಗೊಂಡ ಬಳಿಕ ಚಿಕಿತ್ಸೆಯಲ್ಲಿರುವ ಖಮೇನಿ
ಟೆಹ್ರಾನ್: ಇರಾನ್ನ ಸರ್ವೋಚ್ಛ ನಾಯಕ ಮೊಜ್ತಬಾ ಖಮೇನಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ ಎಂದು ಇಸ್ರೇಲ್-ಅಮೆರಿಕ ಗುಪ್ತಚರ ಮೂಲಗಳನ್ನಾಧರಿಸಿ ಮಾಧ್ಯಮಗಳು ವರದಿ ಮಾಡಿವೆ. ಮೊಜ್ತಬಾ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ಸದ್ಯ ಅವರನ್ನ ಕೋಮ್ ನಗರದ ರಹಸ್ಯ ಸ್ಥಳದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಮೆರಿಕ ದಾಳಿ ಎಚ್ಚರಿಕೆ ನಡುವೆಯೇ ಈ ಘಟನೆ ಸಂಭವಿಸಿದ್ದು, ನಾಯಕತ್ವದ ಬಗ್ಗೆ ಪ್ರಶ್ನೆಗಳೂ ಎದ್ದಿವೆ. ಆದರೆ ಈ ಬಗ್ಗೆ ಇರಾನ್ ಸರ್ಕಾರವಾಗಲಿ, ಸೇನೆಯಾಗಲಿ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.
ಅಮೆರಿಕ ಮತ್ತು ಇಸ್ರೇಲ್ ಗುಪ್ತಚರ ಸಂಸ್ಥೆಯ ಮೂಲಗಳನ್ನಾಧರಿಸಿ ವರದಿ ಮಾಡಲಾಗಿದೆ. ಗಲ್ಫ್ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳಲಾದ ಮಾಹಿತಿ ಪ್ರಕಾರ, ಮೊಜ್ತಬಾ ಖಮೇನಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಾರೆ. ಗಂಭೀರ ವೈದ್ಯಕೀಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಕೋಮ್ ನಗರದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಿಂದಾಗಿ ಇರಾನ್ ಆಡಳಿತವು ಯುದ್ಧಕ್ಕೆ ಸಂಬಂಧಿಸಿದ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಅಥವಾ ಜವಾಬ್ದಾರಿಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಮತ್ತೊಂದು ಕಡೆ ಫೆ.28ರಂದು ಅಮೆರಿಕ – ಇಸ್ರೇಲ್ ಜಂಟಿಯಾಗಿ ನಡೆಸಿದ ದಾಳಿಯಲ್ಲಿ ಹತ್ಯೆಯಾದ ಅಯತೊಲ್ಲಾ ಅಲಿ ಖಮೇನಿ ಅವರ ಸಮಾಧಿಗೆ ಸಿದ್ಧತೆಗಳು ನಡೆಯುತ್ತಿವೆ. ಕೋಮ್ ನಗರದಲ್ಲಿ ಬೃಹತ್ ಸಮಾಧಿ ನಿರ್ಮಿಸಲು ತಯಾರಿಗಳು ಶುರುವಾಗಿದೆ ಎಂದು ವರದಿಗಳು ತಿಳಿಸಿವೆ.

























