ಷರತ್ತುಗಳಿಗೆ ಒಪ್ಪಿಕೊಳ್ಳದಿದ್ದಲ್ಲಿ ಇರಾನ್ ಮೇಲಿನ ಆಕ್ರಮಣ ಇನ್ನಷ್ಟು ತೀವ್ರ
ವಾಷಿಂಗ್ಟನ್: ಇರಾನ್ ಯುದ್ಧದಲ್ಲಿ ಅಮೆರಿಕ ಅಭೂತಪೂರ್ವ ಜಯ ಗಳಿಸಿದ್ದು, ನಮ್ಮ ಉದ್ದೇಶಗಳನ್ನು ಪೂರೈಸಲು ಸಾಕಷ್ಟು ಹತ್ತಿರವಾಗಿದ್ದೇವೆ. ಆದಾಗ್ಯೂ, ಇರಾನ್ನೊಂದಿಗಿನ ಮಾತುಕತೆಗಳು ವಿಫಲವಾದಲ್ಲಿ ಆಕ್ರಮಣಕಾರಿ ದಾಳಿಗೆ ಅಮೆರಿಕ ಸಜ್ಜಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಹೊರ್ಮುಜ್ ಜಲಸಂಧಿಯಾಗಲಿ ಅವರ ತೈಲವಾಗಲಿ ನಮಗೆ ಬೇಡ ಎಂದು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯ ನಡುವೆ ಟ್ರಂಪ್ ಹೇಳಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಇರಾನ್ ಮೇಲೆ ಅಮೆರಿಕ ನಡೆಸುತ್ತಿರುವ ಆಪರೇಷನ್ ಎಪಿಕ್ ಫ್ಯೂರಿಯಲ್ಲಿ ಇರಾನ್ನ ನೌಕಾಪಡೆ ಸೇರಿದಂತೆ ಅವರ ಮಿಲಿಟರಿಗೆ ದೊಡ್ಡ ನಷ್ಟವಾಗಿದ್ದು, ಕ್ಷಿಪಣಿಗಳು ಮತ್ತು ಡ್ರೋನ್ಗಳನ್ನು ಉಡಾಯಿಸುವ ಅವರ ಸಾಮರ್ಥ್ಯ, ಅವರ ಶಸ್ತ್ರಾಸ್ತ್ರ ಕಾರ್ಖಾನೆಗಳು ಮತ್ತು ರಾಕೆಟ್ ಲಾಂಚರ್ಗಳನ್ನು ಛಿದ್ರಗೊಳಿಸಲಾಗಿದೆ. ಅವರ ಮಿಲಿಟರಿ ಸಾಮರ್ಥ್ಯಗಳನ್ನು ಗಣನೀಯವಾಗಿ ಕುಗ್ಗಿಸಿದ್ದೇವೆ, ಜೊತೆಗೆ ಈಗ ಅವರಲ್ಲಿ ಇರಾನ್ ಸೈನ್ಯವು ಹೋಗಿದೆ, ಅವರ ನಾಯಕತ್ವವು ಹೋಗಿದೆ, ಅವರ IRGC ಕಮಾಂಡರ್ ನಾಶವಾಗಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ.
ಈ ಯುದ್ಧದಲ್ಲಿ ಇರಾನ್ ಪರಮಾಣು ಸಾಮರ್ಥ್ಯವನ್ನು ಹೊಂದಿರಬಾರದು ಎಂಬ ಅಮೆರಿಕದ ನಿಲುವನ್ನು ಪುನರುಚ್ಚರಿಸಿದ ಟ್ರಂಪ್, ಈ ನಿಲುವು ಸ್ಪಷ್ಟವಾಗಿದ್ದು, ಇರಾನ್ ಪರಮಾಣು ಶಕ್ತಿಯನ್ನು ಹೊಂದಲು ಸಾಧ್ಯವಿಲ್ಲ. ಇದಕ್ಕಾಗಿಯೇ ನಾನು ಇರಾನ್ ಜೊತೆಗಿನ ಬರಾಕ್ ಒಬಾಮಾ ಅವರ ವಿನಾಶಕಾರಿ ಪರಮಾಣು ಒಪ್ಪಂದವನ್ನು ರದ್ದುಗೊಳಿಸಿದ್ದೇನೆ. ಇರಾನ್ ಪರಮಾಣು ಶಕ್ತಿಯನ್ನು ಹೊಂದಲು ಸಾಧ್ಯವಿಲ್ಲ ಎಂದು ಹಲವು ಎಲ್ಲರೂ ವರ್ಷಗಳಿಂದ ಹೇಳುತ್ತಿದ್ದಾರೆ. ಈ ಯುದ್ಧದಲ್ಲಿ ನಮ್ಮ ಮುಖ್ಯ ಉದ್ದೇಶ ಸಂಪೂರ್ಣವಾಗಿ ಇರಾನ್ನ ನೌಕಾಪಡೆಯನ್ನು ಕೆಡುಹುವುದು ಅವರ ಮಿಲಿಟರಿಯನ್ನು ನಾಶಪಡಿಸುವುದು ಪ್ರಮುಖವಾಗಿ ಅವರ ಪರಮಾಣು ಬಾಂಬ್ ನಿರ್ಮಿಸುವ ಮತ್ತು ಪ್ರಾದೇಶಿಕವಾಗಿ ಭಯೋತ್ಪಾದಕ ಪ್ರಾಕ್ಸಿಗಳಿಗೆ ಬೆಂಬಲ ನೀಡುವ ಅವರ ಸಾಮರ್ಥ್ಯವನ್ನು ನಾಶಮಾಡುವುದು ಎಂದು ತಿಳಿಸಿದ್ದಾರೆ.
ಈ ಯುದ್ಧದ ಅಮೆರಿಕದ ಭದ್ರತೆ ಹಾಗೂ ಸುರಕ್ಷತೆಗೆ ಅಗತ್ಯ ಎಂದಿರುವ ಟ್ರಂಪ್ ಈ ಭಯೋತ್ಪಾದಕರು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವುದು ಅಸಹನೀಯ ಬೆದರಿಕೆಯಾಗಿದೆ. ಏಕೆಂದರೆ, ಭೂಮಿಯ ಮೇಲಿನ ಅತ್ಯಂತ ಹಿಂಸಾತ್ಮಕ ಮತ್ತು ದರೋಡೆಕೋರ ಆಡಳಿತ ಪರಮಾಣು ಎಂಬ ಗುರಾಣಿಯ ನೆಪದಿಂದ ಪ್ರಪಂಚದಲ್ಲಿ ಭಯೋತ್ಪಾದನೆ, ಬಲವಂತ ಮತ್ತು ಸಾಮೂಹಿಕ ಹತ್ಯೆಯ ಚಟುವಟಿಕೆಗಳನ್ನು ನಡೆಸಲು ಶಕ್ತಿ ನೀಡಿದಂತಾಗುತ್ತದೆ ಎಂದಿದ್ದಾರೆ.
ಇರಾನ್ ಮಾತುಕತೆಗಳಲ್ಲಿ ಷರತ್ತುಗಳಿಗೆ ಒಪ್ಪಿಕೊಳ್ಳದಿದ್ದಲ್ಲಿ, ಮುಂದಿನ 2-3ವಾರಗಳ ಕಾಲ ಇರಾನ್ ಮೇಲಿನ ಆಕ್ರಮಣದ ತೀವ್ರತೆ ಹೆಚ್ಚಾಗಲಿದ್ದು, ಇರಾನ್ನ ಪ್ರಮುಖ ಮೂಲಸೌಕರ್ಯಗಳು, ವಿದ್ಯುತ್ ಉತ್ಪಾದನಾ ಸೌಲಭ್ಯಗಳನ್ನು ಗುರಿಯಾಗಿಸಿ ದಾಳಿ ನಡೆಯಲಿದೆ. ಅವರನ್ನು ಮತ್ತೆ ಶಿಲಾಯುಗಕ್ಕೆ ಹೋಗುವಂತೆ ಧ್ವಂಸ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಅಮೆರಿಕದ ಬಳಿ ಸಾಕಷ್ಟು ಕಚ್ಚಾತೈಲವಿದ್ದು, ಸೌದಿ ಅರೇಬಿಯಾ ಹಾಗೂ ರಷ್ಯಾ ಒಟ್ಟಿಗೆ ಉತ್ಪಾದಿಸುವ ತೈಲಕ್ಕಿಂತ ಹೆಚ್ಚಿನ ತೈಲ ಮತ್ತು ಅನಿಲವನ್ನು ನಾವು ಉತ್ಪಾದಿಸುತ್ತೇವೆ, ಯಾರಿಂದಲೂ ತೈಲವನ್ನು ಖರೀದಿಸುವಂತಹ ಪರಿಸ್ಥಿತಿಯಿಲ್ಲ. ಹಾಗಾಗಿ ನಮಗೆ ಪಶ್ಚಿಮ ಏಷ್ಯಾದಿಂದ ಬರುವ ತೈಲದ ಅಗತ್ಯವಿಲ್ಲ ಎಂದಿದ್ದಾರೆ.

























