50 ವರ್ಷಗಳ ಬಳಿಕ ಚಂದ್ರನ ಅನ್ವೇಷಣೆ – ನಾಲ್ವರು ಗಗನಯಾತ್ರಿಗಳಿರುವ ನೌಕೆ
ಫ್ಲೋರಿಡಾ: 50 ವರ್ಷಗಳ ಬಳಿಕ ಚಂದ್ರನ ಅನ್ವೇಷಣೆಗೆ ಹೊರಟಿರುವ ನಾಸಾ ಐತಿಹಾಸಿಕ ಆರ್ಟೆಮಿಸ್-(Artemis II) ಮಿಷನ್ ಉಡಾವಣೆ ಯಶಸ್ವಿಯಾಗಿದೆ. ಅಮೆರಿಕದ ಕಾಲಮಾನ ಬುಧವಾರ ಸಂಜೆ 6:35 (ಭಾರತೀಯ ಕಾಲಮಾನ ಗುರುವಾರ ಬೆಳಗ್ಗೆ4.05) ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಲ್ವರು ಗಗನಯಾತ್ರಿಗಳಿದ್ದ ಒರಾಯನ್ ಬಾಹ್ಯಾಕಾಶ ನೌಕೆಯನ್ನು ಅತ್ಯಂತ ಶಕ್ತಿಶಾಲಿ ಸ್ಪೇಸ್ ಲಾಂಚ್ ಸಿಸ್ಟಮ್ (SLS) ರಾಕೆಟ್ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ.
ಉಡಾವಣೆಯಾದ ಸುಮಾರು 8.5 ನಿಮಿಷಗಳ ನಂತರ SLS ರಾಕೆಟ್ನ ಕೋರ್ ಸ್ಟೇಜ್ (ದೊಡ್ಡ ಕೆಳಭಾಗ) ಬೇರ್ಪಟ್ಟಿತು. ಈ ಸಮಯದಲ್ಲಿ ಒರಾಯನ್ ನೌಕೆಯು ತನ್ನ ಮೇಲಿನ ಹಂತವಾದ ICPS ನೊಂದಿಗೆ (Interim Cryogenic Propulsion Stage) ಭೂಮಿಯ ಕೆಳ ಕಕ್ಷೆಯನ್ನು (Low Earth Orbit) ತಲುಪಿತು.
ನೌಕೆಯು ಭೂಮಿಯ ಸುತ್ತ ತನ್ನ ಮೊದಲ ಕಕ್ಷೆಯಲ್ಲಿ ಸಂಚರಿಸಲಾರಂಭಿಸಿದ ಬಳಿಕ 10ರಿಂದ 40 ನಿಮಿಷಗಳವರೆಗೆ ಗಗನಯಾತ್ರಿಗಳು ಮತ್ತು ನಾಸಾ ನಿಯಂತ್ರಣ ಕೇಂದ್ರವು ನೌಕೆಯ ಸೌರಫಲಕಗಳು (Solar Arrays) ಸರಿಯಾಗಿ ತೆರೆದುಕೊಂಡಿವೆಯೇ ಎಂದು ಪರೀಕ್ಷಿಸಿದರು.

























