ಬಂಟ್ವಾಳ : ನರಿಕೊಂಬು ಗ್ರಾಮದ ನೆಹರೂ ನಗರದಲ್ಲಿ ಮಾದಕ ವಸ್ತು ಸೇವಿಸಿ ಅಸಭ್ಯವಾಗಿ ವರ್ತಿಸುತ್ತಿದ್ದ ತಂಡದ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ವ್ಯಕ್ತಿಯನ್ನು ಬಂಟ್ವಾಳ ಸಜಿಪ ಮೂಡ ನಿವಾಸಿ ಶಾಕೀರ್ (28 ) ಎಂದು ಗುರುತಿಸಲಾಗಿದೆ.
ಮಾರ್ಚ್ 30ರಂದು ಸಂಜೆ ಬಂಟ್ವಾಳ ನಗರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕ ಸಂದೀಪ್ ಕುಮಾರ್ ಶೆಟ್ಟಿಯವರಿಗೆ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನೆಹರೂ ನಗರದಲ್ಲಿ ಕೆಲವು ವ್ಯಕ್ತಿಗಳು ಮಾದಕ ವಸ್ತುವನ್ನು ಸೇವಿಸಿ ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತ್ತಿದ್ದಾರೆಂದು ಮಾಹಿತಿ ಬಂದಿತ್ತು.
ಸಿಬ್ಬಂದಿಯೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ತೆರಳಿದಾಗ ಅಲ್ಲೇ ಮೈದಾನದಲ್ಲಿ ನಿಂತಿದ್ದ KA19-AE6387ನೇ ನೋಂದಣಿಯ ಕಾರಿನಲ್ಲಿ ಜನರಿದ್ದು, ಪೊಲೀಸರನ್ನು ಕಂಡು ಪರಾರಿಯಾಗಿದ್ದಾರೆ. ಅವರ ಪೈಕಿ ಓರ್ವನನ್ನು ಹಿಡಿದು ವಿಚಾರಣೆ ನಡೆಸಲಾಗಿದೆ. ಈ ವೇಳೆ ಆತ ತಾನು ಹಾಗೂ ತನ್ನೊಂದಿಗಿದ್ದ ಅಸೀಪ್, ಸಿದ್ದಿಕ್ ಮತ್ತು ಇರ್ಷಾದ್ ಎಂಬವರುಗಳು ಒಟ್ಟಿಗೆ ಮಾದಕ ವಸ್ತು ಸೇವನೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.
ಈ ಬಗ್ಗೆ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಶಾಕೀರ್ ಮಾದಕವಸ್ತು ಸೇವಿಸಿರುವುದು ದೃಢಪಟ್ಟಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣಾ ಅ.ಕ್ರ 41/2026 ಕಲಂ : 27(a) NDPS ACT 1985ಯಂತೆ ಪ್ರಕರಣ ದಾಖಲಾಗಿದೆ.

























