ಸೀಮೆಎಣ್ಣೆ ವಿತರಣೆಗೆ ಅನುಮತಿ ನೀಡಿದ ಕೇಂದ್ರ ಸರ್ಕಾರ

ಗ್ಯಾಸ್‌ ಅಭಾವದ ಹಿನ್ನೆಲೆಯಲ್ಲಿ ಸೀಮೆಏಣ್ಣೆ ವಿತರಿಸಲು ಪೆಟ್ರೋಲ್‌ ಪಂಪ್‌ಗಳಿಗೆ ಅನುಮತಿ

ನವದೆಹಲಿ: ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಅಡುಗೆ ಅನಿಲ ಅಭಾವ ತಲೆದೋರಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸೀಮೆಎಣ್ಣೆ ವಿತರಣೆ ಮಾಡುವ ನಿಯಮವನ್ನು ಸಡಿಲಗೊಳಿಸಿದೆ. ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ತೈಲ ಬಿಕ್ಕಟ್ಟು ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ, ಮನೆಗಳಿಗೆ (ಅಡುಗೆ ಮತ್ತು ದೀಪಗಳ ಬಳಕೆಗೆ) ಅಗತ್ಯವಾದ ಇಂಧನ ತಲುಪಿಸಲು ಈ ನಿರ್ಧಾರ ತೆಗೆದುಕೊಂಡಿದೆ.

ಮಾರ್ಚ್ 29ರಂದು ಹೊರಡಿಸಲಾದ ಗೆಜೆಟ್ ಅಧಿಸೂಚನೆಯ ಪ್ರಕಾರ, ದೆಹಲಿ, ಹರಿಯಾಣ, ಉತ್ತರ ಪ್ರದೇಶ ಮತ್ತು ಗುಜರಾತ್ ಸೇರಿದಂತೆ 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೀಮೆಎಣ್ಣೆ ವಿತರಿಸಲು ಅನುಮತಿ ನೀಡಿದೆ. ಮುಂದಿನ 60 ದಿನಗಳವರೆಗೆ ಪೆಟ್ರೋಲ್‌ ಪಂಪ್‌ಗಳು ಸೇರಿದಂತೆ ಚಿಲ್ಲರೆ ಮಾರ್ಗಗಳ ಮೂಲಕ ಸೀಮೆಎಣ್ಣೆ ವಿತರಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಅನುಮತಿ ನೀಡಿದೆ.























































 
 

ಮನೆಯ ಅಡುಗೆ ಉದ್ದೇಶಗಳಿಗಾಗಿ ಸೀಮೆಎಣ್ಣೆಯನ್ನು ಪೂರೈಸಲು ವ್ಯವಸ್ಥೆ ಮಾಡಲಾಗಿದ್ದು, ಈ ಸಡಿಲಿಕೆ ತಕ್ಷಣದಿಂದ ಜಾರಿಗೆ ಬಂದಿದೆ. 60 ದಿನಗಳವರೆಗೆ ಅಥವಾ ಮುಂದಿನ ಆದೇಶದವರೆಗೆ ಮಾನ್ಯವಾಗಿರುತ್ತವೆ.

1934 ಮತ್ತು 2002ರ ಪೆಟ್ರೋಲಿಯಂ ಕಾಯ್ದೆಯ ಅಡಿಯಲ್ಲಿ ಸರ್ಕಾರ ಕೆಲವು ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಮಾನ್ಯ ಸುರಕ್ಷತೆ ಮತ್ತು ಪರವಾನಗಿ ನಿಯಮಗಳಿಂದ ತಾತ್ಕಾಲಿಕವಾಗಿ ವಿನಾಯಿತಿ ನೀಡಬಹುದಾಗಿದೆ. ಹಾಗಾಗಿ ಕಠಿಣ ಸಂದರ್ಭಗಳಲ್ಲಿ ಕಾಯ್ದೆಯ ಯಾವುದೇ ನಿಬಂಧನೆಗಳಿಂದ ಅಥವಾ ಅದರ ಉಪವಿಭಾಗಗಳಿಂದ ಪೆಟ್ರೋಲಿಯಂ ಸರಕುಗಳ ವರ್ಗಕ್ಕೆ ವಿನಾಯಿತಿ ನೀಡಲು ಕೇಂದ್ರ ಸರ್ಕಾರ ಅಧಿಕಾರ ಹೊಂದಿದೆ. ಜೊತೆಗೆ ಷರತ್ತುಗಳನ್ನೂ ವಿಧಿಸಬಹುದಾಗಿದೆ ಎಂದು ಸಚಿವಾಲಯ ಹೇಳಿದೆ.

ಪರಿಷ್ಕೃತ ಮಾನದಂಡಗಳ ಅಡಿಯಲ್ಲಿ ಗೊತ್ತುಪಡಿಸಿದ ಪೆಟ್ರೋಲ್ ಪಂಪ್‌ಗಳು ಅಡುಗೆ ಮತ್ತು ಬೆಳಕಿನ ಉದ್ದೇಶಗಳಿಗಾಗಿ ಮನೆಗಳಿಗೆ ಸೀಮೆಎಣ್ಣೆ ಸಂಗ್ರಹಿಸಿ ವಿತರಿಸಲು ಅನುಮತಿಸಲಾಗುತ್ತದೆ. ಪ್ರತಿ ಘಟಕ 5,000 ಲೀಟರ್‌ಗಳವರೆಗೆ ಸಂಗ್ರಹಿಸಬಹುದಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳು ಪ್ರತಿ ಜಿಲ್ಲೆಯಲ್ಲಿ 2 ಸೇವಾ ಕೇಂದ್ರಗಳನ್ನು ಗುರುತಿಸಲಿವೆ ಎಂದು ಕೇಂದ್ರ ಸಚಿವಾಲಯ ಹೇಳಿದೆ.

2002ರ ಕಾಯ್ದೆಯ ಪ್ರಕಾರ ಸೀಮೆಎಣ್ಣೆಯನ್ನು ನಿರ್ವಹಿಸುವ ಡೀಲರ್‌ಗಳು ಮತ್ತು ಸಾರಿಗೆ ವಾಹನಗಳಿಗೆ ಪರವಾನಗಿ ಅವಶ್ಯಕತೆಗಳನ್ನೂ ಸಡಿಲಗೊಳಿಸಲಾಗಿದೆ.

error: Content is protected !!
Scroll to Top