ಐಪಿಎಲ್‌ : ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿಗೆ ಭರ್ಜರಿ ಜಯ

ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 200ಕ್ಕೂ ಹೆಚ್ಚು ರನ್ ಚೇಸ್ ಮಾಡಿದ ದಾಖಲೆ

ಬೆಂಗಳೂರು: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 19ನೇ ಆವೃತ್ತಿಯ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್​ ತಂಡವನ್ನು ಮಣಿಸಿದ ಹಾಲಿ ಚಾಂಪಿಯನ್‌ ಆರ್​ಸಿಬಿ ಗೆಲುವಿನ ಶುಭಾರಂಭ ಮಾಡಿದೆ. ತವರಿನಲ್ಲಿ ಬಲಿಷ್ಠ ಬ್ಯಾಟಿಂಗ್‌ ವಿಭಾಗವನ್ನು ಹೊಂದಿದ್ದ ಎಸ್​ಆರ್‌ಎಚ್ ತಂಡವನ್ನು ಮಕಾಡೆ ಮಲಗಿಸಿದ ಆರ್​ಸಿಬಿ ಕೇವಲ 15.4 ಓವರ್​ಗಳಲ್ಲಿ 202 ರನ್ ಬೆನ್ನಟ್ಟಿ ಜಯದ ನಗೆ ಬೀರಿತು.

ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಸನ್​ರೈಸರ್ಸ್​ ಹೈದರಾಬಾದ್ 201 ರನ್ ಕಲೆಹಾಕಿತು. ಗೆಲುವಿಗೆ 202 ರನ್​ಗಳ ಗುರಿ ಬೆನ್ನಟ್ಟಿದ ಆರ್​ಸಿಬಿ, ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿ ಅವರ ಅಬ್ಬರದ ಅರ್ಧಶತಕದ ನೆರವಿನಿಂದ ಸುಲಭ ಜಯ ದಾಖಲಿಸಿತು. ಈ ಮೂಲಕ ಆರ್​ಸಿಬಿ ಮೊದಲ ಪಂದ್ಯದಲ್ಲೇ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ವೇಗವಾಗಿ 200ಕ್ಕೂ ಹೆಚ್ಚು ರನ್ ಚೇಸ್ ಮಾಡಿದ ದಾಖಲೆ ಬರೆಯಿತು.























































 
 

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 201 ರನ್ ಗಳಿಸಿತು. ತಂಡದ ಪರ ನಾಯಕ ಇಶಾನ್ ಕಿಶನ್ 38 ಎಸೆತಗಳಲ್ಲಿ 8 ಬೌಂಡರಿ ಮತ್ತು 5 ಸಿಕ್ಸರ್‌ಗಳ ನೆರವಿನಿಂದ 80 ರನ್​ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಕೊನೆಯಲ್ಲಿ ಅಬ್ಬರಿಸಿದ ಅನಿಕೇತ್ ವರ್ಮಾ ಕೂಡ 18 ಎಸೆತಗಳಲ್ಲಿ 43 ರನ್​ಗಳ ಕಾಣಿಕೆ ನೀಡಿದರೆ, ಹೆನ್ರಿಕ್ ಕ್ಲಾಸೆನ್ 31 ರನ್ ಬಾರಿಸಿದರು. ಇತ್ತ ಆರ್​ಸಿಬಿ ಪರ ಬೌಲಿಂಗ್‌ನಲ್ಲಿ ಮಿಂಚಿದ ಜಾಕೋಬ್ ಡಫಿ 4 ಓವರ್‌ಗಳಲ್ಲಿ ಕೇವಲ 22 ರನ್‌ ನೀಡಿ 3 ವಿಕೆಟ್ ಪಡೆದರು. ರೊಮೆರೊ ಶೆಫರ್ಡ್ ಕೂಡ 3 ವಿಕೆಟ್ ಪಡೆದರೆ, ಅಭಿನಂದನ್, ಭುವನೇಶ್ವರ್ ಹಾಗೂ ಸುಯೇಶ್ ಶರ್ಮಾ ತಲಾ 1 ವಿಕೆಟ್ ಪಡೆದರು.

ಈ ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡ ಕಳಪೆ ಆರಂಭ ಪಡೆಯಿತು. ಪ್ರಸ್ತುತ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ಫಿಲ್ ಸಾಲ್ಟ್ 9 ರನ್ ಬಾರಿಸಿ ಔಟಾದರು. ಆದರೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ದೇವದತ್ ಪಡಿಕ್ಕಲ್ ತಂಡದ ಗೆಲುವನ್ನು ಆರಂಭದಲ್ಲೇ ಖಚಿತಪಡಿಸಿದರು. ಕೇವಲ 21 ಎಸೆತಗಳಲ್ಲಿ ತಮ್ಮ ಐಪಿಎಲ್ ವೃತ್ತಿಜೀವನದ ಅತಿ ವೇಗದ ಅರ್ಧ ಶತಕ ಬಾರಿಸಿದ ಪಡಿಕ್ಕಲ್ ಅಂತಿಮವಾಗಿ 26 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಿತ 61 ರನ್ ಗಳಿಸಿ ಔಟಾದರು.

ಪಡಿಕ್ಕಲ್ ಔಟಾಗುವುದಕ್ಕೂ ಮುನ್ನ ವಿರಾಟ್ ಕೊಹ್ಲಿ ಜೊತೆಗೆ ಎರಡನೇ ವಿಕೆಟ್​ಗೆ ಶತಕದ ಜೊತೆಯಾಟವನ್ನು ಕಟ್ಟಿದರು. ಪಡಿಕ್ಕಲ್ ಔಟಾದ ಬಳಿಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದ ವಿರಾಟ್ ಕೊಹ್ಲಿ 38 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಐದು ಸಿಕ್ಸರ್‌ಗಳ ಸಹಿತ ಅಜೇಯ 69 ರನ್ ಬಾರಿಸಿದರು. ನಾಯಕ ರಜತ್ ಪಟಿದಾರ್ 12 ಎಸೆತಗಳಲ್ಲಿ 31 ರನ್‌ಗಳ ಆಕ್ರಮಣಕಾರಿ ಇನ್ನಿಂಗ್ಸ್ ಆಡಿದರು. ಪರಿಣಾಮವಾಗಿ ಆರ್‌ಸಿಬಿ ಕೇವಲ 15.4 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಈ ಮೂಲಕ ಐಪಿಎಲ್‌ ಇತಿಹಾಸದಲ್ಲಿ ಮೊದಲ ಬಾರಿಗೆ ಎಸ್‌ಆರ್‌ಹೆಚ್ ವಿರುದ್ಧ 190+ ರನ್‌ಗಳ ಗುರಿಯನ್ನು ಆರ್‌ಸಿಬಿ ಯಶಸ್ವಿಯಾಗಿ ಬೆನ್ನಟ್ಟಿದ ದಾಖಲೆಯನ್ನು ಬರೆಯಿತು.

error: Content is protected !!
Scroll to Top