ಎರಡು ದಿನ ಹಿಂದಿನ ಘಟನೆಯ ವಿಡಿಯೋ ವೈರಲ್
ಬೆಂಗಳೂರು : ಬೆಂಗಳೂರಿನ ಪ್ರತಿಷ್ಠಿತ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ.ಮೂರಳಿಧರ ದೇಶಪಾಂಡೆ ತರಗತಿಯಲ್ಲಿ ಪಾಠ ಮಾಡುತ್ತಿದ್ದ ವೇಳೆ ಕೋಪಗೊಂಡು ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದು ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಎರಡು ದಿನಗಳ ಹಿಂದೆ ನಡೆದಿದೆ ಎನ್ನಲಾಗಿದೆ. ಅದರ ವಿಡಿಯೋ ಈಗ ವೈರಲ್ ಆಗಿದೆ.
ಪಾಠದ ಮಧ್ಯದಲ್ಲಿ ಮಕ್ಕಳ ಗಲಾಟೆಯಿಂದ ದೇಶಪಾಂಡೆ ಗರಂ ಆಗಿದ್ದು, ನೀವೆಲ್ಲಾ ಭಯೋತ್ಪಾದಕರು ಎಂದೆಲ್ಲಾ ನಿಂದಿಸಿದ್ದಾರೆ. ಇದೇ ವೇಳೆ ತರಗತಿಯಲ್ಲಿ ಕುಳಿತಿದ್ದ ವಿದ್ಯಾರ್ಥಿಗಳು ತಮ್ಮ ಮೊಬೈಲ್ನಲ್ಲಿ ಘಟನೆಯನ್ನು ಸೆರೆ ಹಿಡಿದಿದ್ದಾರೆ. ಇದೇ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಈ ಬಗ್ಗೆ ದೂರು ದಾಖಲಿಸಿದೆ. ಪ್ರಕರಣದ ಗಂಭೀರತೆಯನ್ನು ಗಮನಿಸಿದ ವಿಶ್ವವಿದ್ಯಾಲಯ ಆಡಳಿತ ತಕ್ಷಣ ಕ್ರಮ ಕೈಗೊಂಡು ಪ್ರೊಫೆಸರ್ ಅವರನ್ನು ಅಮಾನತು ಮಾಡಿದೆ.

























