ಕಾರ್ಕಳ : ಕೋಳಿ ಅಂಕದ ವ್ಯವಹಾರದ ಹಣಕ್ಕೆ ಸಂಬಂಧಿಸಿದ ವಿವಾದವೊಂದು ಮಾರಾಮಾರಿಗೆ ತಿರುಗಿ ಪರಸ್ಪರ ಹಲ್ಲೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಸಂಭವಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜೆಕಾರು ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಬೈರಂಪಳ್ಳಿ ಹರಿಕಂಡಿಗೆಯ ಪ್ರತಾಪ್ ಪೂಜಾರಿ (32), ಕಡ್ತಲ ಗ್ರಾಮದ ಸಿರಿಬೈಲು ನಿವಾಸಿ ದಿಲೀಪ್ ಶೆಟ್ಟಿ (28), ಮುತ್ತುಪಾಡಿಯ ಸುದರ್ಶನ್ ಶೆಟ್ಟಿ (36) ಮತ್ತು ವರಂಗ ಗ್ರಾಮದ ಮೂಡುಕುದೂರು ನಿವಾಸಿ ಆಕಾಶ್ (21) ಎಂದು ಗುರುತಿಸಲಾಗಿದೆ.
ಮಾರ್ಚ್ 26ರಂದು ರಾತ್ರಿ ಸುಮಾರು 8 ಗಂಟೆಗೆ ಅಂದಾರು ಗ್ರಾಮದ ಮುತ್ತುಪಾಡಿ ಎಂಬಲ್ಲಿ ಈ ಘಟನೆ ನಡೆದಿದೆ. ಹರೀಶ್, ಸುಧೀರ್, ದುರ್ಗಾ, ಗುರುದೀಶ್ ಮತ್ತು ಪ್ರತಾಪ್ ಸೇರಿದಂತೆ ಸುಮಾರು 15 ಜನರ ತಂಡ ಕಾರು ಮತ್ತು ಬೈಕ್‌ಗಳಲ್ಲಿ ಬಂದು ಸುದರ್ಶನ್ ಶೆಟ್ಟಿ ಎಂಬವರ ಮೇಲೆ ಹಲ್ಲೆ ನಡೆಸಿದೆ ಎಂದು ಆರೋಪಿಸಲಾಗಿದೆ.
ಈ ಜಗಳವನ್ನು ಬಿಡಿಸಲು ಪದ್ಮಾ ಮತ್ತು ಆಕಾಶ್ ಎಂಬವರು ಪ್ರಯತ್ನಿಸಿದಾಗ, ಹರೀಶ್ ಎಂಬಾತ ಅವಾಚ್ಯ ಶಬ್ದಗಳಿಂದ ನಿಂದಿಸಿ, ಜಾತಿ ನಿಂದನೆ ಮಾಡಿ ಅವರ ಮೇಲೆಯೂ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಈ ಮಾರಾಮಾರಿಯ ಸಂದರ್ಭದಲ್ಲಿ ಆಕಾಶ್ ಎಂಬವರಿಗೂ ಗಾಯಗಳಾಗಿವೆ.

























