ಯುದ್ಧ ನಿಲ್ಲಿಸಲು ಮಧ್ಯಸ್ಥಿಕೆ ವಹಿಸುವ ಪಾಕಿಸ್ತಾನದ ಕೊಡುಗೆಗೆ ಹಿಗ್ಗಾಮುಗ್ಗಾ ಲೇವಡಿ
ವಾಷಿಂಗ್ಟನ್ : ಅಮೆರಿಕ ಮತ್ತು ಇರಾನ್ ನಡುವೆ ಮಧ್ಯಸ್ಥಿಕೆ ವಹಿಸಲು ಬಂದ ಪಾಕಿಸ್ತಾನ ಅದೇ ಅಮೆರಿಕದಿಂದ ಅಪಮಾನಕ್ಕೆ ಗುರಿಯಾಗಿದೆ. ಅಮೆರಿಕದ ರಕ್ಷಣಾ ತಜ್ಞ ಮತ್ತು ಭೌಗೋಳಿಕ ರಾಜಕೀಯ ಸಲಹೆಗಾರ ಡೌಗ್ಲಾಸ್ ಮ್ಯಾಕ್‌ಗ್ರೆಗರ್ ಪಾಕಿಸ್ತಾನದ ಸಂಧಾನದ ಕೊಡುಗೆಯನ್ನು ಹಾಸ್ಯಾಸ್ಪದ ಮತ್ತು ಅಸಂಬದ್ಧತೆ ಎಂದು ಲೇವಡಿ ಮಾಡಿದ್ದಾರೆ.
ಮಧ್ಯಪ್ರಾಚ್ಯ ಸಂಘರ್ಷ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸಲು ಸಜ್ಜಾದ ಇಸ್ಲಾಮಾಬಾದ್ ವಿಶ್ವಾಸಾರ್ಹತೆಯನ್ನೇ ಪ್ರಶ್ನಸಿರುವ ಡೌಗ್ಲಾಸ್ ಮ್ಯಾಕ್‌ಗ್ರೆಗರ್, ಪಾಕಿಸ್ತಾನದ ಆಂತರಿಕ ಅಸ್ಥಿರತೆ ಮತ್ತು ಆರ್ಥಿಕ ತೊಂದರೆಗಳು ಅದನ್ನು ಎಂದಿಗೂ ಒಂದು ವಿಶ್ವಾಸಾರ್ಹ ಮಧ್ಯವರ್ತಿಯನ್ನಾಗಿ ಮಾಡುವುದಿಲ್ಲ. ಅವರದ್ದೇ ದೇಶದಲ್ಲಿ ಶಾಂತಿ ಇಲ್ಲ, ಹಣವಿಲ್ಲ. ಹೀಗಿರುವಾಗ ಅವರು ಬೇರೆ ದೇಶಗಳ ಯುದ್ಧ ನಿಲ್ಲಿಸಲು ಹೇಗೆ ಸಾಧ್ಯ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಪಾಕಿಸ್ತಾನಿಗಳು ಈ ಜಾಗತಿಕ ಯುದ್ಧದಲ್ಲಿ ಸಹಾಯ ಮಾಡಲು ಮುಂದಾಗುವುದು ಹೇಗಿದೆ ಅಂದರೆ, ಉರಿಯುತ್ತಿರುವ ಕಟ್ಟಡದಲ್ಲಿ ಸಿಲುಕಿರುವ ವ್ಯಕ್ತಿಯೊಬ್ಬ, ದಾರಿಹೋಕನಿಗೆ ಬಂದು ನನ್ನ ಮನೆಯಲ್ಲಿ ಬಾಡಿಗೆಗೆ ರೂಮ್ ಬೇಕಾ ಎಂದು ಕೇಳಿದಂತಿದೆ ಎಂದು ಡೌಗ್ಲಾಸ್ ಮ್ಯಾಕ್‌ಗ್ರೆಗರ್ ವ್ಯಂಗ್ಯವಾಡಿದ್ದಾರೆ. ಅಲ್ಲದೇ ಪಾಕಿಸ್ತಾನದ ಮಧ್ಯಸ್ಥಿಕೆ ಪ್ರಸ್ತಾವನೆಗೆ ಇಸ್ರೇಲ್ ಒಪ್ಪಿಗೆ ಸೂಚಿಸಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದ್ದಾರೆ.
ಪಾಕಿಸ್ತಾನವನ್ನು ಇಸ್ರೇಲ್ ಒಂದು ತಟಸ್ಥ ರಾಷ್ಟ್ರವಾಗಿ ನೋಡುವುದೇ ಇಲ್ಲ. ಬದಲಾಗಿ ಅದನ್ನು ಬೆಂಜಮಿನ್ ನೆತನ್ಯಾಹು ಸರ್ಕಾರ ಸಮಸ್ಯೆಯ ಒಂದು ಭಾಗವಾಗಿ ಪರಿಗಣಿಸುತ್ತದೆ. ಹೀಗಿರುವಾಗ ಪಾಕಿಸ್ತಾನದ ಮಧ್ಯಸ್ಥಿಕೆ ಪ್ರಸ್ತಾವನೆಯನ್ನು ಅಮೆರಿಕವೂ ಒಪ್ಪೊಕೊಳ್ಳುವುದಿಲ್ಲ ಎಂಬುದು ಅಮೆರಿಕದ ರಕ್ಷಣಾ ತಜ್ಞರ ಖಚಿತ ಅಭಿಪ್ರಾಯವಾಗಿದೆ.
ಗಂಭೀರ ಮತ್ತು ಸೂಕ್ಷ್ಮ ಪರಿಸ್ಥಿತಿಯಲ್ಲಿ, ಭೌಗೋಳಿಕ ರಾಜಕೀಯದ ಜ್ಞಾನವೇ ಇಲ್ಲದ ಪಾಕಿಸ್ತಾನದಂತಹ ದೇಶಗಳು, ಮಧ್ಯಸ್ಥಿಕೆ ವಹಿಸುವುದಾಗಿ ಹೇಳುತ್ತಿರುವುದನ್ನು ಜಾಗತಿಕ ರಕ್ಷಣಾ ವಿಶ್ಲೇಷಕರು ಹಾಸ್ಯಾಸ್ಪದವಾಗಿ ನೋಡುತ್ತಿದ್ದಾರೆ. ತನ್ನ ದೇಶದ ಜನರಿಗೆ ಎರಡು ಹೊತ್ತಿನ ಊಟ ಕೊಡಲಾಗದ ಪಾಕ್ ಸರ್ಕಾರ, ಜಾಗತಿಕ ಯುದ್ಧವನ್ನು ನಿಲ್ಲಿಸಲು ಹೊರಟಿರುವುದು ಹಾಸ್ಯಾಸ್ಪದ ಅಸಂಬದ್ಧತೆಯೇ ಸರಿ. ಪಾಕಿಸ್ತಾನ ಮೊದಲು ತನ್ನ ಉರಿಯುತ್ತಿರುವ ಮನೆಯ ಬೆಂಕಿಯನ್ನು ನಂದಿಸಿಕೊಳ್ಳಲಿ. ಆಮೇಲೆ ಜಗತ್ತಿನ ಶಾಂತಿಯ ಬಗ್ಗೆ ಯೋಚಿಸಲಿ ಎಂಬ ಜಾಗತಿಕ ತಜ್ಞರ ಅಭಿಪ್ರಾಯಗಳಲ್ಲಿ ಸತ್ಯಾಂಶ ಇದೆ.
ಇನ್ನು ಮಧ್ಯಪ್ರಾಚ್ಯ ಸಂಘರ್ಷ ಕೊನೆಗಾಣಿಸಲು ಮಧ್ಯಸ್ಥಿಕೆವಹಿಸುವ ಅವಕಾಶವನ್ನು ಭಾರತ ಕಳೆದುಕೊಂಡಿದೆ ಎಂಬ ವಿಶ್ಲೇಷಣೆಗಳಿಗೆ ಸೂಕ್ತ ತಿರುಗೇಟು ನೀಡಿರುವ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್, ಜಾಗತಿಕ ಶಕ್ತಿಗಳ ನಡುವೆ ಬ್ರೋಕರ್ ಪಾತ್ರವಹಿಸಲು ಭಾರತ ಪಾಕಿಸ್ತಾನವಲ್ಲ ಎಂದು ಹೇಳಿದ್ದಾರೆ.

























