ಶಾಂತಿ ಮಾತುಕತೆ, ಸಂಧಾನ ಮಾತುಕತೆಗಳು ಚೆನ್ನಾಗಿ ನಡೆಯುತ್ತಿವೆ ಎಂದ ಅಮೆರಿಕದ ಅಧ್ಯಕ್ಷ
ಅಮೆರಿಕ: ಇರಾನ್ನ ವಿನಂತಿಯ ಮೇರೆಗೆ ಇಂಧನ ಸಂಪನ್ಮೂಲಗಳ ಮೇಲಿನ ದಾಳಿಯ ಗಡುವನ್ನು ಏಪ್ರಿಲ್ 6ರವರೆಗೆ ಮುಂದೂಡಲಾಗಿದೆ. ಶಾಂತಿ ಮಾತುಕತೆ, ಸಂಧಾನ ಮಾತುಕತೆಗಳು ಚೆನ್ನಾಗಿ ನಡೆಯುತ್ತಿವೆ ಎಂದು ಅಮೆರಿಕದ ಅಧ್ಯಕ್ಷ ಡಿನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ.
ಈ ಬಗ್ಗೆ ಟ್ರುಥ್ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿರುವ ಅವರು, ಅಮೆರಿಕ-ಇರಾನ್ ಮಧ್ಯೆ ಶಾಂತಿ ಸಂಧಾನ ಸಭೆಗಳು ಚೆನ್ನಾಗಿ ನಡೆಯುತ್ತಿವೆ. ಇತರರು ಹಾಗೂ ಫೇಕ್ನ್ಯೂಸ್ ಮಾಧ್ಯಮಗಳು ಹೇಳುತ್ತಿರುವುದಕ್ಕೆ ವ್ಯತಿರಿಕ್ತವಾಗಿ ಮಾತುಕತೆಗಳು ಚೆನ್ನಾಗಿ ನಡೆಯುತ್ತಿವೆ ಎಂದಿದ್ದಾರೆ.
ಇರಾನ್ ಸಂಧಾನ ಷರತ್ತುಗಳಿಗೆ ತಣ್ಣಗೆ ಪ್ರತಿಕ್ರಿಯೆ ಕೊಡುತ್ತಿದ್ದರೂ, ಮಧ್ಯಪ್ರಾಚ್ಯ ಯುದ್ಧ ಕೊನೆಗಾಣಿಸಲು ಸಂಧಾನಕ್ಕಾಗಿ ಅಮೆರಿಕ ಹಪಾಹಪಿಸುತ್ತಿದೆ ಎಂಬ ವಾದವನ್ನು ಡೊನಾಲ್ಡ್ ಟ್ರಂಪ್ ನಿರಾಕರಿಸಿದ್ದಾರೆ.
ಕಳೆದ ಶನಿವಾರ ಇರಾನ್ಗೆ 48 ಗಂಟೆಗಳ ಗಡುವು ಕೊಟ್ಟಿದ್ದ ಟ್ರಂಪ್, ಹಾರ್ಮುಜ್ ಜಲಸಂಧಿಯನ್ನು ತೈಲ ಹಡಗುಗಳ ಸಂಚಾರಕ್ಕೆ ಮುಕ್ತ ಮಾಡಬೇಕು, ಇಲ್ಲದಿದ್ದರೆ, ಇರಾನ್ನ ಇಂಧನ ಸಂಪನ್ಮೂಲಗಳನ್ನು ನಾಶ ಪಡಿಸುವುದಾಗಿ ಎಚ್ಚರಿಕೆ ನೀಡಿದ್ದರು. ಇದೀಗ ಈ ಎಚ್ಚರಿಕೆಯ ಗಡುವನ್ನು ಇನ್ನೂ ಹತ್ತು ದಿನ ಮುಂದೂಡಿಕೆ ಮಾಡಿ ಎರಡನೇ ಬಾರಿಗೆ ಇರಾನ್ಗೆ ಅವಕಾಶ ನೀಡಿದ್ದಾರೆ.
ಇರಾನ್ ಸರಕಾರದ ಮನವಿ ಮೇರೆಗೆ, ಇಂಧನ ಸಂಪನ್ಮೂಲಗಳ ಮೇಲಿನ ವಿನಾಶಕಾರಿ ದಾಳಿಯನ್ನು ಸೋಮವಾರ ಏಪ್ರಿಲ್ 6 ರಾತ್ರಿ ಸಮಯ 8 ಗಂಟೆಯವರೆಗೆ, 10 ದಿನಗಳ ಕಾಲ ಮುಂದೂಡುತ್ತಿದ್ದೇನೆ ಎಂದು ಟ್ರುಥ್ ಸೋಷಿಯಲ್ನಲ್ಲಿ ಪೋಸ್ಟ್ ಮಾಡಿದ್ದಾರೆ.

























