ತೆರೆಯದಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರಗಳನ್ನು ನಾಶ ಮಾಡುವ ಬೆದರಿಕೆ
ವಾಷಿಂಗ್ಟನ್ : ವಿಶ್ವಕ್ಕೆ ಐದನೇ ಒಂದು ಭಾಗದಷ್ಟು ತೈಲ ಸಾಗಾಟವಾಗುವ ಹಾರ್ಮುಜ್ ಜಲಸಂಧಿಯನ್ನು ಹಡಗುಗಳ ಮುಕ್ತ ಸಂಚಾರಕ್ಕಾಗಿ ಮತ್ತೆ ತೆರೆಯದಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರಗಳನ್ನು ನಾಶಪಡಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಮುಂದಿನ 48 ಗಂಟೆಗಳಲ್ಲಿ ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಅಮೆರಿಕ ಹಲವಾರು ವಿದ್ಯುತ್ ಸ್ಥಾವರಗಳನ್ನು ಗುರಿಯಾಗಿರಿಸಿ ಸಂಪೂರ್ಣವಾಗಿ ನಾಶಪಡಿಸುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ.
ಫೆಬ್ರವರಿ 28ರಂದು ಟೆಹ್ರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ನಡೆಸಿದ ನಂತರ ಇರಾನ್ ವಿರುದ್ಧ ದಾಳಿಯಲ್ಲಿ ಭಾಗಿಯಾಗಿರುವ ದೇಶಗಳ ಹಡಗು ಸಂಚಾರ ನಿರ್ಬಂಧಿಸಿ ಇರಾನ್ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿತ್ತು. ಯುಕೆ, ಫ್ರಾನ್ಸ್, ಇಟಲಿ, ಜರ್ಮನಿ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಯುಎಇ ಮತ್ತು ಬಹ್ರೇನ್ ಸೇರಿದಂತೆ ಹಲವು ದೇಶಗಳು ಹಾರ್ಮುಜ್ ಜಲಸಂಧಿಯನ್ನು ಮುಚ್ಚಿರುವುದನ್ನು ಖಂಡಿಸಿವೆ.
ಹಾರ್ಮುಜ್ ಜಲಸಂಧಿಯು ಯುದ್ಧಪೂರ್ವ ಸ್ಥಿತಿಗೆ ಮರಳುವುದಿಲ್ಲ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್-ಬಾಘರ್ ಗಾಲಿಬಾಫ್ ಈ ಹಿಂದೆ ಎಚ್ಚರಿಸಿದ್ದರು.
ಹಾರ್ಮುಜ್ ಜಲಸಂಧಿಯಲ್ಲಿ ಹಡಗು ಸಾಗಣೆಗೆ ಇರಾನ್ ಒಡ್ಡಿರುವ ಬೆದರಿಕೆಗಳು ಜಾಗತಿಕ ತೈಲ ಬೆಲೆಗಳು ಗಣನೀಯವಾಗಿ ಏರಿಕೆಯಾಗಲು ಕಾರಣವಾಗಿವೆ. ಹಾರ್ಮುಜ್ ಜಲಸಂಧಿಯು ವಿಶ್ವದ ತೈಲ ಪೂರೈಕೆಯ ಸರಿಸುಮಾರು ಐದನೇ ಒಂದು ಭಾಗವನ್ನು ಹೊಂದಿದೆ, ಇದು ಜಾಗತಿಕ ಇಂಧನ ವ್ಯಾಪಾರಕ್ಕೆ ಅತ್ಯಂತ ಮುಖ್ಯವಾಗಿದೆ.
ಹಾರ್ಮುಜ್ ಜಲಸಂಧಿಯು ವಿಶ್ವದ ಅತ್ಯಂತ ಪ್ರಮುಖ ಸಮುದ್ರ ಮಾರ್ಗವಾಗಿದೆ. ಇದು ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿಗೆ ಮತ್ತು ಮುಂದೆ ಅರೇಬಿಯನ್ ಸಮುದ್ರಕ್ಕೆ ಸಂಪರ್ಕಿಸುತ್ತದೆ. ಇದನ್ನು ಜಾಗತಿಕ ತೈಲ ಪೂರೈಕೆಯ ಜೀವನಾಡಿ ಎಂದು ಕರೆಯಲಾಗುತ್ತದೆ. ಅರೇಬ್ ದೇಶಗಳು, ಇರಾನ್, ಇರಾಕ್, ಕುವೈತ್ ದೇಶಗಳು ತೈಲವನ್ನು ಈ ಮಾರ್ಗದ ಮೂಲಕ ರಫ್ತು ಮಾಡುತ್ತವೆ. ಇದರ ನಿರ್ಬಂಧವು ಪ್ರಪಂಚದಾದ್ಯಂತ ಪೆಟ್ರೋಲ್-ಡೀಸೆಲ್ ಬೆಲೆಗಳು ಮತ್ತು ಅನಿಲ ಸಮಸ್ಯೆಗಳನ್ನು ಸೃಷ್ಟಿಸಿದೆ.

























