ತುರ್ತು ರೈಲು ಹಳಿ ಕಾಮಗಾರಿಗೆ ಹಲವು ರೈಲುಗಳ ಸಂಚಾರ ವ್ಯತ್ಯಯ
ಮಂಗಳೂರು: ತುರ್ತು ಹಳಿ ನಿರ್ವಹಣಾ ಕಾರ್ಯ ನಡೆಯಲಿರುವುದರಿಂದ ಮಂಗಳೂರು ಮತ್ತು ಸುಬ್ರಹ್ಮಣ್ಯ ನಡುವೆ ಕಾರ್ಯನಿರ್ವಹಿಸುವ ಪ್ರಯಾಣಿಕ ರೈಲು ಸೇವೆಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲಾಗಿದೆ. ಮಂಗಳೂರು ಸೆಂಟ್ರಲ್ ಮತ್ತು ಸುಬ್ರಹ್ಮಣ್ಯ ಮಾರ್ಗವಾಗಿ ಸಂಚರಿಸುವ ಪ್ಯಾಸೆಂಜರ್ ರೈಲುಗಳನ್ನು ಒಟ್ಟು 35 ದಿನಗಳವರೆಗೆ ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ರೈಲು ಸಂಖ್ಯೆ 56629 (ಮಂಗಳೂರು – ಸುಬ್ರಹ್ಮಣ್ಯ ರಸ್ತೆ ಪ್ಯಾಸೆಂಜರ್) ಮತ್ತು ರೈಲು ಸಂಖ್ಯೆ 56630 (ಸುಬ್ರಹ್ಮಣ್ಯ ರಸ್ತೆ – ಮಂಗಳೂರು ಪ್ಯಾಸೆಂಜರ್) ಮಾರ್ಚ್ 23ರಿಂದ ಏಪ್ರಿಲ್ 14ರವರೆಗೆ ಮತ್ತು ಮತ್ತೆ ಜೂನ್ 10ರಿಂದ ಜೂನ್ 21ರವರೆಗೆ ರದ್ದು ಮಾಡಲಾಗಿದೆ.
ಏಪ್ರಿಲ್ ತಿಂಗಳಲ್ಲಿ ಹಲವಾರು ಎಕ್ಸ್ಪ್ರೆಸ್ ರೈಲುಗಳ ಸಮಯದಲ್ಲೂ ಬದಲಾವಣೆಗಳನ್ನು ಮಾಡಲಾಗಿದೆ. ಯಶವಂತಪುರ – ಕಾರವಾರ (16515), ಯಶವಂತಪುರ – ಮಂಗಳೂರು (16575) ಮತ್ತು ಯಶವಂತಪುರ – ಮಂಗಳೂರು (16539) ಎಕ್ಸ್ಪ್ರೆಸ್ ರೈಲುಗಳು ಸುಮಾರು 20 ನಿಮಿಷಗಳ ಕಾಲ ವಿಳಂಬವಾಗುತ್ತವೆ. ಮಂಗಳೂರು – ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು (56229) ಏಪ್ರಿಲ್ 21ರಿಂದ ಜೂನ್ 9ರವರೆಗೆ 55 ನಿಮಿಷಗಳ ಕಾಲ ವಿಳಂಬವಾಗಲಿದೆ ಎಂದು ಇಲಾಖೆ ಹೇಳಿದೆ.



























