ಹುಬ್ಬಳ್ಳಿ: ರೀಲ್ಸ್ ಹುಚ್ಚಿನಿಂದ ಹದಿನೈದು ವರ್ಷದ ಹುಡುಗನೊಬ್ಬ ಪ್ರಾಣವನ್ನೇ ಕಳೆದುಕೊಂಡ ದುರಂತ ಘಟನೆ ನಡೆದಿದೆ.
ಮೃತನನ್ನು ನಮೀಷ ಸಂಗಳದ ಎಂದು ಗುರುತಿಸಲಾಗಿದೆ. ಈತ ಮೈಸೂರಿನಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ. ಯುಗಾದಿ ರಜಾ ಹಿನ್ನೆಲೆ ಮನೆಗೆ ಬಂದಿದ್ದಾಗಿ ತಿಳಿದು ಬಂದಿದೆ.
ಐಷಾರಾಮಿ ಕಾರು ಮತ್ತು ಬೈಕ್‌ಗಳಲ್ಲಿ ತನ್ನ ಗೆಳೆಯರ ಜೊತೆಗೆ ಸ್ಟಂಟ್ ಮಾಡಲು ನಮೀಷ ಮುಂದಾಗಿದ್ದಾನೆ. ಈ ವೇಳೆ ಕಾರಿನ ನಿಯಂತ್ರಣ ತಪ್ಪಿ ನಮೀಷ ಚಲಾಯಿಸುತ್ತಿದ್ದ ಬೈಕ್‌ಗೆ ಗುದ್ದಿದೆ. ಸ್ಥಳದಲ್ಲೇ ನಮೀಷ ಮೃತಪಟ್ಟಿದ್ದಾನೆ.
ಮೃತ ಬಾಲಕ ಬಿಜೆಪಿ ಮುಖಂಡ ವೀರೇಶ್ ಸಂಗಳದ ಅವರ ಪುತ್ರ. ಯುಗಾದಿಯ ದಿನವೇ ಪುತ್ರನ ಮರಣದಿಂದ ಅವರ ಮನೆಯಲ್ಲಿ ಸ್ಮಶಾನ ಮೌನ ಆವರಿಸುವಂತಾಗಿದೆ. ಬಾಲಕನ ರೀಲ್ಸ್ ಹುಚ್ಚು ಆತನ ಜೀವದ ಜೊತೆಗೆ ಇಡೀ ಮನೆಯ ಯುಗಾದಿ ಸಂತೋಷಕ್ಕೆ ಬೆಂಕಿ ಇಟ್ಟಿದೆ.
ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ವಿದ್ಯಾನಗರ ಪೊಲೀಸರು, ಅಪ್ರಾಪ್ತರಿಗೆ ವಾಹನ ನೀಡಿದ್ದರ ಬಗ್ಗೆಯೂ ತನಿಖೆ ನಡೆಸುತ್ತಿದ್ದಾರೆ.



























