ಬೆಂಗಳೂರು: ತನ್ನ ತಾಯಿ ಮತ್ತು ಸಹೋದರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಸ್ನೇಹಿತನನ್ನು ಯುವಕನೊಬ್ಬ ಹತ್ಯೆ ಮಾಡಿದ ಘಟನೆ ಆವಲಹಳ್ಳಿಯಲ್ಲಿ ನಡೆದಿದೆ.
ಹತ್ಯೆಯಾದ ಯುವಕನನ್ನು ಬಿಹಾರ ಮೂಲದ ಕುನಾಲ್ (22) ಎಂದು ಗುರುತಿಸಲಾಗಿದೆ.
ಕೊಲೆಗಾರನನ್ನು ನಸ್ರುಲ್ಲಾ(24) ಎಂದು ಗುರುತಿಸಲಾಗಿದೆ.
ಕ್ಷುಲ್ಲಕ ಕಾರಣಕ್ಕಾಗಿ ಹದಿನೈದು ದಿನಗಳ ಹಿಂದೆ ಇವರಿಬ್ಬರ ನಡುವೆ ಜಗಳ ನಡೆದಿತ್ತು. ಈ ಸಂದರ್ಭದಲ್ಲಿ ನಸ್ರುಲ್ಲಾನ ತಾಯಿ ಮತ್ತು ಸಹೋದರಿಯ ಬಗ್ಗೆ ಕುನಾಲ್ ಕೆಟ್ಟದಾಗಿ ಮಾತನಾಡಿದ್ದು, ಇದರಿಂದ ಆಕ್ರೋಶಗೊಂಡಿದ್ದ ನಸ್ರುಲ್ಲಾ ಮದ್ಯದ ಅಮಲಿನಲ್ಲಿ ಕುನಾಲ್‌ನ ರೂಮ್‌ಗೆ ನುಗ್ಗಿ ಆತನ ಮೇಲೆ ಸುತ್ತಿಗೆಯಿಂದ ಹೊಡೆದು ಪರಾರಿಯಾಗಿದ್ದ.
ಇದರಿಂದ ತೀವ್ರ ಗಾಯಗೊಂಡ ಆತನನ್ನು ಮತ್ತೊಬ್ಬ ಸ್ನೇಹಿತ ಆಸ್ಪತ್ರೆಗೆ ದಾಖಲು ಮಾಡಿದ್ದ. ಆದರೆ ಚಿಕಿತ್ಸೆ ಫಲಿಸದೆ ಕುನಾಲ್ ಮೃತಪಟ್ಟಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿ ನಸ್ರುಲ್ಲಾನನ್ನು ದಾಬಸ್ ಪೇಟೆ ರೈಲು ನಿಲ್ದಾಣದಿಂದ ವಶಕ್ಕೆ ಪಡೆದಿದ್ದಾರೆ.



























