ಕಡಬ: ತಲೆನೋವಿನಿಂದ ಬಳಲುತ್ತಿದ್ದ 10 ವರ್ಷದ ಬಾಲಕನೊಬ್ಬ ಔಷಧಿ ಸೇವಿಸಿದ ಬಳಿಕ ಮೃತಪಟ್ಟ ದುರ್ಘಟನೆ ಕಡಬ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಡಬ ತಾಲೂಕಿನ ರಾಮಕುಂಜ ನಿವಾಸಿ ಸಂಜೀವ ಪೂಜಾರಿ (50) ಅವರ ಪುತ್ರನಿಗೆ ಪದೇಪದೆ ತಲೆನೋವು ಕಾಣಿಸಿಕೊಳ್ಳುತ್ತಿತ್ತು ಎನ್ನಲಾಗಿದೆ. ಮಾರ್ಚ್ 18ರಂದು ಸಂಜೆ ಬಾಲಕ ತಲೆನೋವಿಗಾಗಿ ಮನೆಯಲ್ಲಿದ್ದ ಔಷಧಿ ಸೇವಿಸಿದ್ದಾನೆ. ಬಳಿಕ ಅವನು ಮನೆಯಲ್ಲಿ ಅಸ್ವಸ್ಥಗೊಂಡು ಹೊರಳಾಡುತ್ತಿದ್ದಾನೆಂದು ತಾಯಿ ಮಾಹಿತಿ ನೀಡಿದ್ದಾರೆ.
ತಕ್ಷಣ ಮನೆಗೆ ಬಂದ ತಂದೆ, ಮಗನನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗೆ ಪುತ್ತೂರಿಗೆ ಕರೆದುಕೊಂಡು ಹೋಗಲಾಗಿದೆ. ಆದರೆ ಅಲ್ಲಿ ವೈದ್ಯರು ಪರೀಕ್ಷಿಸಿದಾಗ ಬಾಲಕ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಸಂಬಂಧ ಕಡಬ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ಎಸ್ 2023ರ ಕಲಂ 194ರಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ. ಬಾಲಕನ ಸಾವಿನ ನಿಖರ ಕಾರಣ ತಿಳಿಯಲು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.



























