ಏ.9ರಂದು ನಡೆಯಲಿರುವ ಉಪಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿದ ಬಿಜೆಪಿ
ಬೆಂಗಳೂರು: ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಹೆಸರುಗಳನ್ನು ಬಿಡುಗಡೆ ಮಾಡಿದೆ. ಏಪ್ರಿಲ್ 9ರಂದು ನಡೆಯಲಿರುವ ಈ ಚುನಾವಣೆಗೆ ಬಾಗಲಕೋಟೆಯಲ್ಲಿ ಲಿಂಗಾಯತ ಸಮುದಾಯದ ಪ್ರಭಾವಿ ನಾಯಕ ವೀರಣ್ಣ ಚರಂತಿಮಠ ಅವರಿಗೆ ಬಿಜೆಪಿ ಮತ್ತೆ ಮಣೆ ಹಾಕಿದೆ. ಕ್ಷೇತ್ರದಲ್ಲಿ ಲಿಂಗಾಯತ ಮತಗಳ ಪ್ರಾಬಲ್ಯ ಹೆಚ್ಚಿರುವುದರಿಂದ ಬಿಜೆಪಿ ಈ ನಿರ್ಧಾರ ತೆಗೆದುಕೊಂಡಿದೆ. ಬಾಗಲಕೋಟೆಯಲ್ಲಿ ಮಾಜಿ ಶಾಸಕ ಎಚ್.ವೈ. ಮೇಟಿ ಅವರ ನಿಧನ ನಂತರ ಉಪಚುನಾವಣೆ ಘೋಷಣೆಯಾದ ನಂತರ ಕಾಂಗ್ರೆಸ್ನಲ್ಲಿ ಭಾರೀ ಗದ್ದಲ ಉಂಟಾಗಿದೆ. ಇದರ ನಡುವೆ ಬಿಜೆಪಿ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡುವ ಮೂಲಕ ರಾಜಕೀಯ ನೇರ ಪೈಪೋಟಿಗೆ ವೇದಿಕೆ ಸಿದ್ಧ ಮಾಡಿದೆ.
ದಾವಣಗೆರೆ ದಕ್ಷಿಣ ಕ್ಷೇತ್ರ ಅಭ್ಯರ್ಥಿಯಾಗಿ ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡಿದೆ. ಇಲ್ಲಿ ಬಿಜೆಪಿ ವಾಲ್ಮೀಕಿ ಸಮುದಾಯಕ್ಕೆ ಆದ್ಯತೆ ನೀಡಿದೆ. ಎಸ್‌ಟಿ ಮತಗಳನ್ನು ಸೆಳೆಯುವ ಉದ್ದೇಶದಿಂದ ಶ್ರೀನಿವಾಸ್ ದಾಸಕರಿಯಪ್ಪ ಅವರನ್ನು ಕಣಕ್ಕಿಳಿಸಲಾಗಿದ್ದು, ಕ್ಷೇತ್ರದಲ್ಲಿ ಸಾಮಾಜಿಕ ಸಮತೋಲನ ಕಾಪಾಡಲು ಬಿಜೆಪಿ ಪ್ರಯತ್ನಿಸಿದೆ. ಇಲ್ಲಿಯೂ ಕೂಡ ಈ ಹಿಂದೆ ಕಾಂಗ್ರೆಸ್ ಪ್ರಾಬಲ್ಯ ಇತ್ತು. ಕಾಂಗ್ರೆಸ್ನ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ನಿಧನವಾದ ನಂತರ ಇಲ್ಲಿ ಕಾಂಗ್ರೆಸ್ಗೆ ಅಭ್ಯರ್ಥಿ ಆಯ್ಕೆ ತಲೆನೋವಾಗಿದೆ. ಬಿಜೆಪಿ ನಾಯಕರು ಇಂದಿನಿಂದಲೇ ಚುನಾವಣಾ ಪ್ರಚಾರವನ್ನು ಆರಂಭಿಸುತ್ತೇವೆ ಎಂದು ಹೇಳಿದ್ದಾರೆ.
ದಾವಣಗೆರೆ ಕಾಂಗ್ರೆಸ್ ತೆಕ್ಕೆಯಲ್ಲಿ ಇತ್ತು. ಈ ಕಾರಣಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರಿ ಜಿದ್ದಾಜಿದ್ದಿ ನಡೆಯಲಿದೆ. ಇಲ್ಲಿ ಶ್ರೀನಿವಾಸ್ ಟಿ. ದಾಸಕರಿಯಪ್ಪ ಅವರಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಹೊಸ ಪ್ರಯೋಗವೊಂದನ್ನು ಮಾಡಲು ಮುಂದಾಗಿದೆ. ಎಸ್‌ಟಿ ಮತಗಳು ನಿರ್ಣಾಯಕವಾಗಿರುವುದರಿಂದ ಬಿಜೆಪಿ ಈ ತಂತ್ರ ಹೂಡಿದೆ ಎಂದು ಹೇಳಲಾಗಿದೆ. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ನೇತೃತ್ವದ ತಂಡ ಅಜಯಕುಮಾರ್ ಅವರಿಗೆ ಟಿಕೆಟ್ ಕೊಡಿಸಲು ಕಳೆದ ಮೂರು ದಿನಗಳಿಂದ ದೆಹಲಿಯಲ್ಲಿ ಠಿಕಾಣಿ ಹೂಡಿತ್ತು. ಆದರೆ ಹೈಕಮಾಂಡ್ ರೇಣುಕಾಚಾರ್ಯ ಅವರ ಪ್ರಸ್ತಾವನೆಯನ್ನು ತಿರಸ್ಕರಿಸುವ ಮೂಲಕ ಅವರಿಗೆ ಭಾರಿ ಹಿನ್ನಡೆ ನೀಡಿದೆ. ಶ್ರೀನಿವಾಸ್ ದಾಸಕರಿಯಪ್ಪ ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ, ದಾಸಕರಿಯಪ್ಪಗೆ ಟಿಕೆಟ್ ಸಿಕ್ಕಿರುವುದು ಸಿದ್ದೇಶ್ವರ ಬಣದ ಕೈ ಮೇಲಾದಂತಾಗಿದೆ. ದಾಸಕರಿಯಪ್ಪ ಪ್ರಸ್ತುತ ರಾಜ್ಯ ಬಿಜೆಪಿ ಎಸ್‌ಟಿ ಮೋರ್ಚಾದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾಂಗ್ರೆಸ್ನ ಅಭ್ಯರ್ಥಿ ಆಯ್ಕೆಯಲ್ಲಿ ಮುಸುಕಿನ ಗುದ್ದಾಟಗಳು ನಡೆಯುತ್ತಿವೆ. ಸಚಿವರಾದ ಜಮೀರ್ ಅಹಮ್ಮದ್ ಖಾನ್ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿದಿದ್ದರೆ ಇನ್ನೊಂದೆಡೆ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಸಮಿತಿ ಎರಡು ಕಡೆಯವರನ್ನು ಕೂರಿಸಿ ಸಭೆ ಮಾಡಿದೆ. ಶಾಮನೂರು ಶಿವಶಂಕರಪ್ಪ ನಿಧನ ನಂತರ ಈ ಕ್ಷೇತ್ರದಲ್ಲಿ ತಮ್ಮದೇ ಬಲ ಸಾಧಿಸಬೇಕು ಎಂಬ ಹಂಬಲ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರದ್ದು, ಅದಕ್ಕಾಗಿ ತನ್ನ ಮಗನಿಗೆ ಟಿಕೆಟ್ ನೀಡಬೇಕು ಎಂದು ಹಠ ಹಿಡಿದಿದ್ದಾರೆ.
ಬಾಗಲಕೋಟೆಯಲ್ಲಿ ಮಾಜಿ ಶಾಸಕ ಎಚ್.ವೈ. ಮೇಟಿ ನಿಧನದ ನಂತರ ಅವರ ಕುಟುಂಬದಲ್ಲೇ ಗೊಂದಲ ಶುರುವಾಗಿದೆ. ಮೇಟಿಯವರ ಹಿರಿಯ ಪುತ್ರ ಮಲ್ಲಿಕಾರ್ಜುನ, ಕಿರಿಯ ಪುತ್ರ ಉಮೇಶ, ಪುತ್ರಿಯರಾದ ಬಾಯಕ್ಕ, ಮಹಾದೇವಿ ಅವರು ನಮ್ಮ ಕುಟುಂಬಕ್ಕೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇಲ್ಲಿಯೂ ಜಾತಿ ಲೆಕ್ಕಚಾರ ಕೂಡ ನಡೆದಿದೆ.
15.50 ಲಕ್ಷ ರೂ. ಜಪ್ತಿ
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದು, ದಾಖಲೆ ಇಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 15.50 ಲಕ್ಷ ರೂಪಾಯಿ ನಗದನ್ನು ನಾಯನೇಗಲಿ ಚೆಕ್ಪೋಸ್ಟ್ನಲ್ಲಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಸ್ವಿಫ್ಟ್ ಕಾರಿನಲ್ಲಿ ಹಣ ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ನಾಯನೇಗಲಿ ಚೆಕ್ಪೋಸ್ಟ್ನಲ್ಲಿ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದರು. ಕಾರನ್ನು ತಡೆದು ತಪಾಸಣೆ ನಡೆಸಿದಾಗ ದೊಡ್ಡ ಮೊತ್ತದ ಹಣ ಪತ್ತೆಯಾಗಿದೆ. ಕಾರಿನಲ್ಲಿದ್ದ ವಿಜಯ್ ಮೇಲಗಡೆ ಮತ್ತು ಕುಮಾರ್ ಹಿರೇಮಠ ಎಂಬುವರನ್ನು ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಈ ಹಣಕ್ಕೆ ಸಂಬಂಧಿಸಿದಂತೆ ಯಾವುದೇ ಪೂರಕ ದಾಖಲೆಗಳನ್ನು ನೀಡದ ಕಾರಣ ಹಣವನ್ನು ಜಪ್ತಿ ಮಾಡಲಾಗಿದೆ. ಏಪ್ರಿಲ್ 9ರಂದು ಬಾಗಲಕೋಟೆ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುತ್ತಿದೆ. ಮತದಾರರಿಗೆ ಹಂಚಲು ಈ ಹಣವನ್ನು ಸಾಗಿಸಲಾಗುತ್ತಿತ್ತೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

























