ಮಂಗಳೂರು: ಭೂಮಿ ವ್ಯವಹಾರಕ್ಕೆ ಸಂಬಂಧಿಸಿದ ಹಳೆಯ ದ್ವೇಷಕ್ಕೆ ವ್ಯಕ್ತಿಯೋರ್ವರನ್ನು ವಾಹನ ಅಪಘಾತ ಮಾಡಿ ಕೊಲೆ ಮಾಡಲು ಹೊರಟ ಆತಂಕಕಾರಿ ಘಟನೆ ಮಂಗಳೂರಿನಲ್ಲಿ ನಡೆದಿದ್ದು, ಈ ಗಂಭೀರ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮಲ್ಲಿಕಟ್ಟೆಯ ಮೋಹನದಾಸ್ ಶೆಟ್ಟಿ ಎಂಬವರ ದ್ವಿಚಕ್ರ ವಾಹನಕ್ಕೆ ಹಳೆ ದ್ವೇಷದ ಕಾರಣಕ್ಕೆ ಆರೋಪಿ ಫಳ್ನೀರ್ ನಿವಾಸಿ ಮಹಮ್ಮದ್ ಶರೀಫ್ ಎಂಬಾತ ಕಾರು ಹತ್ತಿಸಿ ಕೊಲೆ ಮಾಡುವ ಪ್ರಯತ್ನ ಮಾಡಿದ್ದಾನೆ. ಘಟನೆಯಲ್ಲಿ ಮೋಹನ ದಾಸ ಶೆಟ್ಟಿ ಅವರಿಗೆ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಆರೋಪಿ ಶರೀಫ್ ಸುರತ್ಕಲ್‌ನ ಕಾನ ಮತ್ತು ವಾಮಂಜೂರಿನಲ್ಲಿ ಭೂಮಿ ಮೇಲೆ ಸುಮಾರು 2 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದ ಎನ್ನಲಾಗಿದೆ. ಈ ವ್ಯವಹಾರದಲ್ಲಿ ಮೋಹನ್ ದಾಸ್ ಶೆಟ್ಟಿ ಅವರು ತನಗೆ ಮೋಸ ಮಾಡಿದ್ದಾರೆ ಎಂದು ಶರೀಫ್ ಸಿಟ್ಟಾಗಿದ್ದ. ಇದೇ ವಿಚಾರವಾಗಿ ಮಂಗಳವಾರ ಪೂರ್ವಾಹ್ನ 11 ಗಂಟೆ ಸುಮಾರಿಗೆ ನಗರದ ಆರ್ಯ ಸಮಾಜ ರಸ್ತೆಯ ಬದಿಯಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು. ಈ ವೇಳೆ ಶರೀಫ್, ಮೋಹನ್ ದಾಸ್ ಅವರ ಮೊಬೈಲ್ ಫೋನ್ ಕಿತ್ತುಕೊಂಡಿದ್ದ ಎನ್ನಲಾಗಿದೆ. ಬಳಿಕ ಮೋಹನ್ ದಾಸ್ ಶೆಟ್ಟಿ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಅಲ್ಲಿಂದ ತೆರಳುತ್ತಿದ್ದಾಗ, ಅತೀ ವೇಗವಾಗಿ ತನ್ನ ಕಾರನ್ನು ಚಲಾಯಿಸಿಕೊಂಡು ಬಂದ ಶರೀಫ್, ಹಿಂಬದಿಯಿಂದ ಸ್ಕೂಟರ್‌ಗೆ ಬಲವಾಗಿ ಢಿಕ್ಕಿ ಹೊಡೆಸಿದ್ದಾನೆ. ಮೋಹನ್ ದಾಸ್ ಅವರ ಪ್ರಾಣ ತೆಗೆಯುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ಆರೋಪಿಸಲಾಗಿದೆ.
ಪ್ರಕರಣದ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಶರೀಫ್‌ನನ್ನು ವಶಕ್ಕೆ ಪಡೆದಿದ್ದಾರೆ.



























