ಹಾರ್ಮುಜ್ ಜಲಸಂಧಿ ಬಳಿ ಇರುವ ಕ್ಷಿಪಣಿ ತಾಣಗಳನ್ನು ಗುರಿ ಮಾಡಿಕೊಂಡು ದಾಳಿ
ಟೆಹ್ರಾನ್: ಇರಾನ್-ಇಸ್ರೇಲ್ ಮತ್ತು ಅಮೆರಿಕ ಯುದ್ಧ 19ನೇ ದಿನಕ್ಕೆ ಕಾಲಿಟ್ಟಿರುವಂತೆಯೇ ಯುದ್ಧವನ್ನು ಇನ್ನಷ್ಟು ತೀವ್ರಗೊಳಿಸಿರುವ ಇಮೆರಿಕ ಇರಾನ್ ಮೇಲೆ ಬರೋಬ್ಬರಿ 2200 ಕೆಜಿ ಬಾಂಬ್ ತಂದು ಹಾಕಿದೆ. ಇರಾನ್ ಹಿಡಿತದಲ್ಲಿರುವ ಜಗತ್ತಿನ ಪ್ರಮುಖ ನೌಕಾಮಾರ್ಗ ಹಾರ್ಮುಜ್ ಜಲಸಂಧಿ ಬಳಿ ಅಮೆರಿಕ ತೀವ್ರ ದಾಳಿ ನಡೆಸಿ 2,200 ಕೆಜಿಯ ಬೃಹತ್ ಬಂಕರ್ ಬಸ್ಟರ್ ಬಾಂಬ್ ಹಾಕಿದೆ. ಇರಾನಿನ ಕ್ಷಿಪಣಿ ತಾಣಗಳನ್ನು ಈ ದಾಳಿಯಲ್ಲಿ ನಾಶ ಮಾಡಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.
ಹಾರ್ಮುಜ್ ಜಲಸಂಧಿ ಬಳಿಯ ಇರಾನ್‌ನ ಕರಾವಳಿಯುದ್ದಕ್ಕೂ ಇದ್ದ ಕ್ಷಿಪಣಿ ತಾಣಗಳ ಮೇಲೆ ಅಮೆರಿಕ 5,000 ಪೌಂಡ್ (2200 ಕೆಜಿ) ಬಂಕರ್ ಬಸ್ಟರ್ ಬಾಂಬ್ ಸುರಿಮಳೆ ಸುರಿಸಿದೆ. ನಿರ್ಣಾಯಕ ಜಲಮಾರ್ಗವನ್ನು ಮತ್ತೆ ತೆರೆಯುವ ಉದ್ದೇಶದಿಂದ ಅಮೆರಿಕ ಶಸ್ತ್ರಗಾರದಲ್ಲಿರುವ ಕೆಲವು ಶಕ್ತಿಶಾಲಿ ಬಾಂಬ್‌ಗಳ ದಾಳಿ ನಡೆಸಿದೆ.
ಈ ತಾಣಗಳಲ್ಲಿರುವ ಇರಾನಿನ ಹಡಗು ವಿರೋಧಿ ಕ್ರೂಸ್ ಕ್ಷಿಪಣಿಗಳು ಜಲಸಂಧಿಯಲ್ಲಿ ಅಂತಾರಾಷ್ಟ್ರೀಯ ಹಡಗು ಸಾಗಣೆಗೆ ಅಪಾಯವನ್ನುಂಟು ಮಾಡಿದವು. ಹೀಗಾಗಿ, ಅವುಗಳನ್ನು ಹೊಡೆದುರುಳಿಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಯುದ್ಧಕ್ಕೆ ಪ್ರತೀಕಾರವಾಗಿ, ವಿಶ್ವದ ಐದನೇ ಒಂದು ಭಾಗದಷ್ಟು ತೈಲ ಪೂರೈಕೆಯಾಗುವ ಹಾರ್ಮುಜ್ ಜಲಸಂಧಿಯನ್ನು ಇರಾನ್ ಮುಚ್ಚಿತ್ತು. ಇದರಿಂದ ಹಲವು ರಾಷ್ಟ್ರಗಳಲ್ಲಿ ತೈಲ ಬಿಕ್ಕಟ್ಟು ಶುರುವಾಯಿತು. ಪ್ರಮುಖ ಮಾರ್ಗವನ್ನು ಓಪನ್ ಮಾಡುವುದಕ್ಕಾಗಿ ಈ ಬಾಂಬ್ ದಾಳಿ ನಡೆದಿದೆ.
ಹಾರ್ಮುಜ್ ಜಲಸಂಧಿಯನ್ನು ಸುರಕ್ಷಿತಗೊಳಿಸಲು, ಈ ಪ್ರದೇಶದ ತೈಲ ರಫ್ತಿನ ಮೇಲಿರುವ ದಿಗ್ಬಂಧನ ಸಡಿಲಿಸಲು ಸಹಾಯ ಮಾಡುವಂತೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕರೆ ನೀಡಿದ್ದರು. ಆದರೆ, ನ್ಯಾಟೋ ಸೇರಿದಂತೆ ಅಮೆರಿಕದ ಮಿತ್ರರಾಷ್ಟ್ರಗಳು ಈ ಕರೆಯನ್ನು ತಿರಸ್ಕರಿಸಿದ್ದವು. ಜಗತ್ತು ನಮ್ಮ ಪ್ರಯತ್ನಗಳನ್ನು ಮೆಚ್ಚದಿದ್ದರೂ ನಾವು ವಿಶ್ವದ ಒಳಿತಿಗಾಗಿ ಯುದ್ಧವನ್ನು ನಡೆಸುತ್ತಿದ್ದೇನೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ.



























