ಬಸ್ ಟಿಕೆಟ್ ದರ ಹೆಚ್ಚಾಗಿದೆ ಎಂದು ಕೊರಿಯರ್ ಮೂಲಕ ಕಳುಹಿಸುವ ಐಡಿಯಾ
ಬೆಂಗಳೂರು: ರೀಲ್ಸ್ ಮಾಡುವುದಕ್ಕೆ ಜೀವಂತ ವ್ಯಕ್ತಿಯನ್ನು ಚೀಲದಲ್ಲಿ ತುಂಬಿಸಿ ಕೊರಿಯರ್ ಮಾಡಲು ಬಂದ ಕೊರಿಯರ್ ಆಫೀಸ್ಗೆ ತಂಡವೊಂದು ಬಂದ ಘಟನೆ ಬೆಂಗಳೂರಿನಲ್ಲಿ ನಿನ್ನೆ ಸಂಭವಿಸಿದೆ. ಮಂಗಳೂರಿಗೆ ಕೊರಿಯರ್ ಪಾರ್ಸೆಲ್ ಮಾಡುವ ನೆಪದಲ್ಲಿ ಈ ತಂಡ ವೈಯಾಲಿಕಾವಲ್ನಲ್ಲಿರುವ ಕೊರಿಯರ್ ಆಫೀಸ್ಗೆ ಬಂದಿದೆ.
ಸಂಜೆ 4.30ರ ಸುಮಾರಿಗೆ ಬಿಳಿಬಣ್ಣದ ಭಾರವಾದ ಗೋಣಿಚೀಲದ ಮೂಟೆಯೊಂದಿಗೆ ನಾಲ್ವರು ವೈಯಾಲಿಕಾವಲ್ನಲ್ಲಿರುವ ಕೊರಿಯರ್ ಆಫೀಸ್ಗೆ ಬಂದು ಇದನ್ನು ಮಂಗಳೂರಿಗೆ ಕಳುಹಿಸಬೇಕೆಂದು ಕೊರಿಯರ್ ಸಿಬ್ಬಂದಿಗೆ ಹೇಳಿದ್ದಾರೆ. ಮೂಟೆ ಅಲುಗಾಡ್ತಿರೋದು ನೋಡಿ ಕೊರಿಯರ್ ಕಚೇರಿಯಲ್ಲಿದ್ದ ಇಬ್ಬರು ಮಹಿಳಾ ಸಿಬ್ಬಂದಿ ಗಾಬರಿಯಾಗಿದ್ದಾರೆ. ಮೂಟೆಯನ್ನು ಓಪನ್ ಮಾಡಿದಾಗ ವೃದ್ಧ ವ್ಯಕ್ತಿ ಮೂಟೆಯಿಂದ ಎದ್ದು ನಿಂತಿದ್ದಾರೆ.
ವೃದ್ಧ ಹೊರನಡೆಯುತ್ತಿದ್ದಂತೆ ಕೊರಿಯರ್ ಪಾರ್ಸೆಲ್ ಮಾಡಲು ಬಂದಿದ್ದ ಇಬ್ಬರು ಮಹಿಳೆಯರು, ಪುರುಷರು ಅಲ್ಲಿಂದ ಎಸ್ಕೇಪ್ ಆಗಿದ್ದಾರೆ. ಮೂಟೆಯಲ್ಲಿದ್ದ ವ್ಯಕ್ತಿಗೆ ಮಾತನಾಡಲು ಕೂಡ ಬರುತ್ತಿರಲಿಲ್ಲ. ಕೊರಿಯರ್ ಆಫೀಸ್ನ ಸಿಬ್ಬಂದಿ ಭಯಪಟ್ಟಿದ್ದು, ವೈಯಾಲಿಕಾವಲ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ನಂತರ ಐವರನ್ನು ಕರೆಸಿ ವಿಚಾರಣೆ ನಡೆಸಿದಾಗ ಒಂದೇ ಕುಟುಂಬದವರು ಸೇರಿಕೊಂಡು ಪ್ರ್ಯಾಂಕ್ ಮಾಡಿರುವುದು ಗೊತ್ತಾಗಿದೆ. ಯುಗಾದಿ ಮತ್ತು ರಮ್ಜಾನ್ ಹಬ್ಬ ಒಟ್ಟಿಗೆ ಬಂದಿದೆ. ಹೀಗಾಗಿ ಬಸ್ನಲ್ಲಿ ಸೀಟ್ ಸಿಗುವುದಿಲ್ಲ ಎಂದು ವ್ಯಕ್ತಿಯನ್ನು ಪಾರ್ಸೆಲ್ ಮಾಡುವ ವಿಷಯ ಇಟ್ಟುಕೊಂಡು ವಿಡಿಯೋ ಮಾಡಲು ಈ ರೀತಿ ಮಾಡಿದ್ದಾಗಿ ಪೊಲೀಸರ ಬಳಿ ಒಪ್ಪಿಕೊಂಡಿದ್ದಾರೆ.
ಪೊಲೀಸರು ಈ ರೀತಿ ಒಬ್ಬ ವ್ಯಕ್ತಿಯನ್ನು ಚೀಲದಲ್ಲಿ ತರುವುದು ತಪ್ಪು ಎಂದು ಗೊತ್ತಿಲ್ವಾ? ನಿಮ್ಮ ಹುಡುಗಾಟಕ್ಕೆ ಚೀಲದಲ್ಲಿದ್ದ ವ್ಯಕ್ತಿ ಉಸಿರುಗಟ್ಟಿ ಸತ್ತಿದ್ರೆ, ಇಲ್ಲ ಆರೋಗ್ಯ ಸಮಸ್ಯೆ ಆಗಿದ್ರೇ ಯಾರು ಹೊಣೆ? ಒಂದು ವೇಳೆ ಕೊರಿಯರ್ ಕಚೇರಿಯ ಸಿಬ್ಬಂದಿಗೆ ಏನಾದರೂ ಆಗಿದ್ದರೆ ಯಾರು ಹೊಣೆ? ರೀಲ್ಸ್ಗಾಗಿ ಈ ರೀತಿ ಹುಡುಕಾಟ ಮಾಡೋದು ಸರಿನಾ? ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
ಈ ಫ್ಯಾಮಿಲಿ `ಮಾಂಕ್ ಫ್ರಾಂಕ್’ ಎಂಬ ಸೋಷಿಯಲ್ ಮೀಡಿಯಾ ಅಕೌಂಟ್ ಹೊಂದಿದ್ದು, ಗಂಡ, ಹೆಂಡತಿ, ಅತ್ತೆ, ಮಾವ ಮತ್ತು ಮೈದುನ ಸೇರಿಕೊಂಡು ರೀಲ್ಸ್, ಪ್ರ್ಯಾಂಕ್ ಮಾಡುತ್ತಿರುತ್ತಾರೆ. ನಾವು ಬಸ್ ರಶ್ ವಿಚಾರದಲ್ಲಿ ಪ್ರ್ಯಾಂಕ್ ಮಾಡಲು ಹೋಗಿದ್ವಿ, ಅದು ಈ ರೀತಿ ತಪ್ಪಾಗುತ್ತೆ ಅಂತಾ ಗೊತ್ತಿರಲಿಲ್ಲ. ನಾವು ತಪ್ಪು ಮಾಡಿದ್ದೇವೆ, ಅದರಿಂದ ಹೀಗೆ ಕಷ್ಟ ಆಗುತ್ತೆ ಅಂತಾ ಗೊತ್ತಿರಲಿಲ್ಲ. ಪೊಲೀಸರು ಕರೆಸಿ ಬುದ್ಧಿ ಹೇಳಿದ್ದಾರೆ. ಇನ್ನು ಮುಂದೆ ಈ ರೀತಿ ನಾವು ಮಾಡಲ್ಲ ಎಂದು ಕೇಳಿಕೊಂಡಿದ್ದಾರೆ.



























