ಮಹಿಳೆಯೊಂದಿಗೆ ಅನುಚಿತ ವರ್ತನೆ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಆದೇಶ
ಮಂಗಳೂರು: ಪೊಲೀಸ್ ಠಾಣೆಗೆ ದೂರು ಕೊಡಲು ಬಂದ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿದ ಹಾಗೂ ಹಣಕ್ಕೆ ಬೇಡಿಕೆ ಇಟ್ಟ ಆರೋಪ ಹೊತ್ತಿರುವ ಮೂಡುಬಿದಿರೆ ಪೊಲೀಸ್ ಇನ್‌ಸ್ಪೆಕ್ಟರ್ ಸಂದೇಶ್ ಪಿ.ಜಿ. ಅವರನ್ನು ಅಮಾನತು ಮಾಡಲಾಗಿದೆ. ಲೈಂಗಿಕ ಕಿರುಕುಳ ಮತ್ತು ಭ್ರಷ್ಟಾಚಾರದ ಆರೋಪಗಳ ಬಗ್ಗೆ ಎಸಿಪಿ ನೀಡಿದ ಪ್ರಾಥಮಿಕ ತನಿಖಾ ವರದಿಯ ಆಧರಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದ್ದಾರೆ. ಆದರೆ ತನಿಖಾ ವರದಿಯ ಪ್ರಕಾರ ವಿಡಿಯೋದಲ್ಲಿರುವ ಮಹಿಳೆ ಬೇರೆ, ಆರೋಪ ಮಾಡಿದ ಸಂತ್ರಸ್ತೆ ಬೇರೆ ಎನ್ನುವುದು ತಿಳಿದುಬಂದಿದೆ. ಸಂತ್ರಸ್ತೆ ವಿರುದ್ಧವೂ ಕೇಸ್ ದಾಖಲಾಗಿರುವ ಅಂಶ ಬೆಳಕಿಗೆ ಬಂದಿದೆ.
ಸಂತ್ರಸ್ತೆ ಮಾಡಿದ ಸಾಲು ಸಾಲು ಆರೋಪಗಳ ಬೆನ್ನಲ್ಲೇ ಸಂದೇಶ್ ವಿರುದ್ಧದ ಪ್ರಕರಣದ ತನಿಖೆಯನ್ನು ಎಸಿಪಿ ಶ್ರೀಕಾಂತ್‌ಗೆ ವಹಿಸಿ ವರದಿ ನೀಡುವಂತೆ ಸೂಚಿಸಲಾಗಿತ್ತು. ಎಸಿಪಿ ಶ್ರೀಕಾಂತ್ ಅವರು ಮಂಗಳವಾರ ಸಂದೇಶ್ ಅವರನ್ನು ವಿಚಾರಣೆ ನಡೆಸಿ ತನಿಖಾ ವರದಿಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸಿದ್ದು, ಈ ವರದಿ ಆಧರಿಸಿ ಸಂದೇಶ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ವರದಿಯಲ್ಲಿ ಸೂಕ್ತ ಸಾಕ್ಷ್ಯಗಳಿಲ್ಲ, ವಿಡಿಯೋದಲ್ಲಿರುವ ಮಹಿಳೆ ಬೇರೆ ಆರೋಪ ಮಾಡಿದ ಸಂತ್ರಸ್ತೆ ಬೇರೆ ಎನ್ನುವ ಅಂಶ ಉಲ್ಲೇಖವಾಗಿದೆ.
ಸಂತ್ರಸ್ತೆಯ ಪರಿಚಯಸ್ಥೆ ಮಹಿಳೆ ದೂರು ಹಾಗೂ ಮಾಧ್ಯಮ ಹೇಳಿಕೆ ನೀಡಿದ್ದಾರೆ. ಅವರ ಮತ್ತು ಅವರ ಸಹೋದರಿಯ ನಡುವೆ ಕುಟುಂಬ ಸಮಸ್ಯೆಗಳು ಇದ್ದು, ಸಂತ್ರಸ್ತೆಯ ಪರಿಚಯಸ್ಥೆ ಮಹಿಳೆ ವಿರುದ್ಧ ಎರಡು ಪ್ರಕರಣಗಳು ಮತ್ತು ಅವರ ಸಹೋದರಿಯ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿವೆ. ಇವುಗಳಲ್ಲಿ ಒಂದು ಪ್ರಕರಣ ತನಿಖೆಯಲ್ಲಿದ್ದು, ಉಳಿದವು ಹೈಕೋರ್ಟ್‌ನಲ್ಲಿ ಸ್ಥಗಿತಗೊಂಡಿದ್ದು, ನ್ಯಾಯಾಲಯದಲ್ಲಿ ವಿಚಾರಣೆ ನಡೆಯಬೇಕಿದೆ ಎಂದು ವರದಿಯಲ್ಲಿದೆ.
ಇನ್‌ಸ್ಪೆಕ್ಟರ್ ವಿರುದ್ಧ ಮಾಧ್ಯಮದಲ್ಲಿ ಹೇಳಿಕೆ ನೀಡಿದ ಮಹಿಳೆಯ ಪತಿಯ ವಿರುದ್ಧ ನಾಲ್ಕು ಪ್ರಕರಣಗಳು ದಾಖಲಾಗಿದ್ದು, ಒಂದರಲ್ಲಿ ಅವರು ಖುಲಾಸೆಯಾಗಿದ್ದಾರೆ. ಒಂದು ಪ್ರಕರಣದಲ್ಲಿ, ಅವರು ಮತ್ತು ಅವರ ಪತಿ ಕಿಡ್ನಿ ಚಿಕಿತ್ಸೆಗೆ ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪವಿದೆ. ಸಾಕ್ಷ್ಯ ಸಂಗ್ರಹದ ನಂತರ ಇವರಿಬ್ಬರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಇವರ ಮೇಲೆ ಯಾವುದೇ ಕಿರುಕುಳದ ಸಾಕ್ಷ್ಯ ದೊರಕಿಲ್ಲ. ಅವರು ಇನ್‌ಸ್ಪೆಕ್ಟರ್ ಹಣ ಕೇಳಿದರು ಹಾಗೂ ಕಿರುಕುಳ ನೀಡಿದರು ಎಂದು ಹೇಳಿದ ಸ್ಥಳದಲ್ಲಿ ಸಿಸಿಟಿವಿ ಇದ್ದು, ಅಲ್ಲಿದ್ದ ಇಬ್ಬರು ಮಾಧ್ಯಮ ಪ್ರತಿನಿಧಿಗಳು ಮತ್ತು ಒಬ್ಬ ವಕೀಲರು ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ.
ಮಾಧ್ಯಮದಲ್ಲಿ ಹೇಳಿಕೆ ನೀಡಿದ ಮಹಿಳೆಯರು ಮತ್ತು ವಿಡಿಯೋ/ಆಡಿಯೋದಲ್ಲಿ ಕಾಣುವ ಮಹಿಳೆಯರು ಬೇರೆಬೇರೆ ವ್ಯಕ್ತಿಗಳಾಗಿದ್ದಾರೆ. ಆದರೆ ವಿಡಿಯೋ ಮತ್ತು ಆಡಿಯೋದಲ್ಲಿ ಇನ್‌ಸ್ಪೆಕ್ಟರ್ ಅಸಭ್ಯ ವರ್ತನೆ ತೋರಿದಂತೆ ಹಾಗೂ ಫೋನ್‌ನಲ್ಲಿ ಮಹಿಳೆಯೊಂದಿಗೆ ಅಸಭ್ಯವಾಗಿ ಮಾತನಾಡಿದಂತೆ ಕಾಣುತ್ತದೆ. ವಿಡಿಯೋ/ಆಡಿಯೋದಲ್ಲಿ ಕಾಣುವ ಇಬ್ಬರು ಮಹಿಳೆಯರು ಯಾವುದೇ ದೂರು ನೀಡಲು ನಿರಾಕರಿಸಿದ್ದಾರೆ. ಅವರಿಗೆ ನಂತರವೂ ಹೇಳಿಕೆ ನೀಡಬಹುದೆಂದು ತಿಳಿಸಲಾಗಿದೆ. ಇದರಿಂದ, ಆಡಿಯೋ ಮತ್ತು ವಿಡಿಯೋ ಆಧಾರದ ಮೇಲೆ ಇನ್ಸ್‌ಪೆಕ್ಟರ್ ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ಗೋಚರಿಸುತ್ತಿದ್ದು, ಅವರನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ. ಹೆಚ್ಚಿನ ತನಿಖೆ ಮುಂದುವರಿಯಲಿದೆ.
ತನ್ನ ಜೊತೆ ಮಲಗಬೇಕು ಅಥವಾ 25 ಲಕ್ಷ ರೂಪಾಯಿ ಹಣ ಕೊಡಬೇಕು ಎನ್ನುವ ಸಂತ್ರಸ್ತೆಯ ಆರೋಪಕ್ಕೆ ಸಾಕ್ಷ್ಯ ಇಲ್ಲ. ಸಂತ್ರಸ್ತೆ ಮೇಲೆ ಕೂಡ ಒಂದು ಪ್ರಕರಣ ದಾಖಲಾಗಿದೆ. ಕಿಡ್ನಿ ಚಿಕಿತ್ಸೆಗೆ ಸಂಗ್ರಹಿಸಿದ ಹಣ ದುರುಪಯೋಗ ಕೇಸ್ ಇದೆ.



























