ವಾಣಿಜ್ಯ ಸಿಲಿಂಡರ್ ಕೊರತೆ ಸಮಸ್ಯೆ ತುಸು ಕಡಿಮೆಯಾಗುವ ನಿರೀಕ್ಷೆ
ಮಂಗಳೂರು : ಮಧ್ಯಪ್ರಾಚ್ಯ ಯುದ್ಧದಿಂದಾಗಿ ಅಡುಗೆ ಅನಿಲ ಅಭಾವ ಉಂಟಾಗಿ ಜನರು ಪರಿತಪಿಸುತ್ತಿದ್ದಾರೆ. ವಾಣಿಜ್ಯ ಉದ್ದೇಶದ ಸಿಲಿಂಡರ್‌ಗಳು ಸಿಗದೆ ಹೋಟೆಲ್ ಮತ್ತಿತರ ವಾಣಿಜ್ಯ ಚಟುವಟಿಕೆಗಳಿಗೆ ಬಹಳ ಸಮಸ್ಯೆಯಾಗಿದೆ. ಅನೇಕ ಹೋಟೆಲ್‌ಗಳು ಬಂದ್ ಆಗಿದ್ದು, ಈ ನಡುವೆ 26,000 ಎಲ್‌ಪಿಜಿ ಹೊತ್ತ ಹಡಗು ಇಂದು ಮಂಗಳೂರು ತಲುಪಲಿದೆ ಎಂಬ ಶುಭ ಸುದ್ದಿ ಬಂದಿದೆ. ಇದರಿಂದ ರಾಜ್ಯದ ಗ್ಯಾಸ್ ಸಮಸ್ಯೆ ಕೊಂಚ ಕಡಿಮೆಯಾಗುವ ನಿರೀಕ್ಷೆ ಇದೆ.
ಇರಾನ್, ಅಮೆರಿಕ, ಇಸ್ರೇಲ್ ನಡುವಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದ್ದು, ನೂರಾರು ತೈಲ ಮತ್ತು ಎಲ್‌ಪಿಜಿ ಸಾಗಿಸುತ್ತಿದ್ದ ಹಡಗುಗಳ ಸಂಚಾರಕ್ಕೆ ಅಡ್ಡಿಯಾಗಿದ್ದವು. ಆದರೆ ಭಾರತದ ರಾಜತಾಂತ್ರಿಕ ಪ್ರಯತ್ನಗಳ ಫಲವಾಗಿ ಇರಾನ್ ನಾಲ್ಕು ಹಡಗುಗಳಿಗೆ ಅವಕಾಶ ನೀಡಿದ್ದು, ಅವುಗಳಲ್ಲಿ 2 ಹಡಗುಗಳು ಈಗಾಗಲೇ ಭಾರತ ತಲುಪಿವೆ. ಮಾರ್ಚ್ 12ರಂದು ಕಚ್ಚಾತೈಲ ಹೊತ್ತ ಮೊದಲ ಹಡಗು ಮುಂಬೈ ತಲುಪಿತ್ತು. ನಂತರ ಮಾರ್ಚ್ 16ರಂದು ಎಲ್‌ಪಿಜಿ ಸಾಗಿಸುತ್ತಿದ್ದ ‘ಶಿವಾಲಿಕ್’ ಹಡಗು ಗುಜರಾತ್‌ನ ಮುಂದ್ರಾ ಬಂದರಿಗೆ ಆಗಮಿಸಿತು. ಈ ಹಡಗಿನಲ್ಲಿ ಒಟ್ಟು 46 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಇದ್ದು, ಅದರಲ್ಲಿ ಸುಮಾರು 20 ಸಾವಿರ ಮೆಟ್ರಿಕ್ ಟನ್ ಅನ್ನು ಮುಂದ್ರಾ ಬಂದರಿನಲ್ಲಿ ಅನ್‌ಲೋಡ್ ಮಾಡಲಾಗಿದೆ.
ಉಳಿದ 26 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ಇಂದೇ ಮಂಗಳೂರು ಬಂದರಿಗೆ ತಂದು ಅನ್‌ಲೋಡ್ ಮಾಡುವ ಸಾಧ್ಯತೆ ಇದೆ. ಇದರಿಂದ ದೇಶದಲ್ಲಿ ಉಂಟಾಗಿದ್ದ ಎಲ್‌ಪಿಜಿ ಕೊರತೆ ಭೀತಿಗೆ ತಾತ್ಕಾಲಿಕ ರಿಲೀಫ್ ಸಿಗುವ ನಿರೀಕ್ಷೆಯಿದೆ. ಇದರ ಜೊತೆಗೆ ‘ನಂದಾದೇವಿ’ ಮತ್ತು ‘ಜಗ್ ಲಾಡ್ಕಿ’ ಎಂಬ ಮತ್ತೆರಡು ಹಡಗುಗಳು ಇಂದು ಭಾರತ ತಲುಪುವ ಸಾಧ್ಯತೆ ಇದೆ. ‘ನಂದಾದೇವಿ’ ಹಡಗಿನಲ್ಲಿ ಸುಮಾರು 40 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಇದ್ದು, ‘ಜಗ್ ಲಾಡ್ಕಿ’ ಹಡಗು ಸುಮಾರು 81 ಸಾವಿರ ಟನ್ ಕಚ್ಚಾತೈಲವನ್ನು ಹೊತ್ತು ಬರುತ್ತಿದೆ.
ಪೆಟ್ರೋಲಿಯಂ ಡೀಲರ್ಸ್‌ಗಳ ಅಂದಾಜಿನ ಪ್ರಕಾರ, ಈ ಎರಡು ಹಡಗುಗಳಿಂದ ಒಟ್ಟು ಸುಮಾರು 92,700 ಮೆಟ್ರಿಕ್ ಟನ್ ಎಲ್‌ಪಿಜಿ ಲಭ್ಯವಾಗಲಿದ್ದು, ಇದು ದೇಶದ ಅವಶ್ಯಕತೆಗೆ ಕೇವಲ 2 ದಿನಗಳ ಮಟ್ಟಿಗೆ ಮಾತ್ರ ಸಾಕಾಗಬಹುದು.
ಇದನ್ನೆಲ್ಲ ಮೀರಿ, ಇನ್ನೂ 20ಕ್ಕೂ ಹೆಚ್ಚು ಭಾರತೀಯ ಹಡಗುಗಳು ಹೊರ್ಮುಜ್ ಜಲಸಂಧಿಯಲ್ಲಿ ಸಿಲುಕಿಕೊಂಡಿವೆ. ಇದೇ ವೇಳೆ ಇರಾನ್‌ನಲ್ಲಿ ಯುದ್ಧದ ಪರಿಣಾಮವಾಗಿ ವೈದ್ಯಕೀಯ ತುರ್ತು ಪರಿಸ್ಥಿತಿ ಉಂಟಾಗಿರುವುದರಿಂದ, ಭಾರತದಿಂದ ಔಷಧಿ ಮತ್ತು ವೈದ್ಯಕೀಯ ನೆರವು ಒದಗಿಸಿದರೆ ಉಳಿದ ಹಡಗುಗಳನ್ನು ಬಿಡುಗಡೆ ಮಾಡುವ ಬಗ್ಗೆ ಇರಾನ್ ಮನವಿ ಮಾಡಿದೆ ಎಂಬ ಮಾಹಿತಿ ಲಭ್ಯವಾಗಿದೆ.


























