ಮಂಗಳೂರು : ಜೈಲು ಅಧೀಕ್ಷಕರ ಮೇಲೆ ಕೈದಿಗಳಿಂದ ಹಲ್ಲೆ

ಮಂಗಳೂರು: ನಗರದ ಜಿಲ್ಲಾ ಕಾರಾಗೃಹದ ಜೈಲು ಅಧೀಕ್ಷಕರು ಮತ್ತು ಸಿಬ್ಬಂದಿ ಮೇಲೆಯೇ ಕೈದಿಗಳು ಹಲ್ಲೆ ನಡೆಸಿದ ಘಟನೆ ಸಂಭವಿಸಿದೆ. ಮೂವರು ವಿಚಾರಣಾಧೀನ ಕೈದಿಗಳು ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆಗೆ ಯತ್ನಿಸಿರುವ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಚಾರಣಾಧೀನ ಕೈದಿಗಳಾದ ಇಕ್ಬಾಲ್, ಶೆಹರಾಜ್ ಯಾನೆ ಶಾರೂಕ್, ಅಫ್ರೀದ್ ಹಲ್ಲೆಗೆ ಯತ್ನಿಸಿದ ಆರೋಪಿಗಳಾಗಿದ್ದಾರೆ.

ಮಾ.13ರಂದು ರಾತ್ರಿ ವಿಚಾರಣಾ ಕೈದಿ ಇಕ್ಬಾಲ್ ಎಂಬಾತ ಕಚೇರಿಗೆ ಬಂದು ಕಾರಾಗೃಹಕ್ಕೆ ಹೊಸದಾಗಿ ದಾಖಲಾಗುವ ಕೈದಿಗಳನ್ನು ತನ್ನ ಕೊಠಡಿಗೆ ಸೇರಿಸಬೇಕು ಎಂದು ಜೋರಾಗಿ ಕೂಗಾಡಿ ಅವಾಚ್ಯವಾಗಿ ಬೈದು ಬೆದರಿಕೆ ಹಾಕಿದ್ದಾನೆ. ಆವಾಗ ತಾನು ಸಮಾಧಾನಪಡಿಸಿದರೂ ಸುಮ್ಮನಾಗದೆ ಹಲ್ಲೆಗೈದ. ಈ ಸಂದರ್ಭ ಆಫ್ರೀದ್ ಎಂಬ ಇನ್ನೊಬ್ಬ ವಿಚಾರಣಾಧೀನ ಕೈದಿ ಕೂಡ ತನಗೆ ಬೈದು ಪ್ಲಾಸ್ಟಿಕ್ ಕುರ್ಚಿಯಿಂದ ಹಲ್ಲೆಗೆ ಯತ್ನಿಸಿದ ಎಂದು ಜೈಲು ಅಧೀಕ್ಷಕ ಶರಣಪ್ಪ ದೂರು ನೀಡಿದ್ದಾರೆ.

ಈ ಆರೋಪಿಗಳು ಜೈಲಿನೊಳಗೆ ಅಳವಡಿಸಿರುವ ನೀರು ಶುದ್ಧೀಕರಣ ಯಂತ್ರ ಮತ್ತು ಪೈಪ್ ಹಾಳು ಮಾಡಿದ್ದಾರೆ. ಇದರ ಮೌಲ್ಯ ಸುಮಾರು 12 ಸಾವಿರ ರೂ. ಅಂದಾಜಿಸಲಾಗಿದೆ. ಇನ್ನೋರ್ವ ಕೈದಿ ಶೆಹರಾಜ್ ತಾನಿದ್ದ ಕೊಠಡಿಯೊಳಗಿನ ವಸ್ತುಗಳಿಗೆ ಹಾನಿ ಮಾಡಿದ್ದಾನೆ. ಕೇರಂ ಬೋರ್ಡ್ ಮುರಿದು ಅದರ ರೀಪುಗಳನ್ನು ಇಕ್ಬಾಲ್ ಮತ್ತು ಆಪ್ರೀದ್‌ಗೆ ನೀಡಿ ಹಲ್ಲೆ ಮಾಡಲು ಪ್ರಚೋದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

























































 
 
error: Content is protected !!
Scroll to Top