ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಬಲ ಹೆಚ್ಚಳ ನಿರೀಕ್ಷೆ
ನವದೆಹಲಿ : 10 ರಾಜ್ಯಗಳ 37 ರಾಜ್ಯಸಭಾ ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದೆ. ಈ ಪೈಕಿ ಏಳು ರಾಜ್ಯಗಳ 26 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಲಿದ್ದಾರೆ. ಉಳಿದ 11 ಅಭ್ಯರ್ಥಿಗಳ ಆಯ್ಕೆಯು ಮತದಾನದ ಮೂಲಕ ನಿರ್ಧಾರ ಆಗಲಿದೆ. ಬೆಳಗ್ಗೆ 9ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಮತದಾನ ಆಗಲಿದ್ದು, ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.
ಮಹಾರಾಷ್ಟ್ರ 7, ತಮಿಳುನಾಡು 6, ಪಶ್ಚಿಮ ಬಂಗಾಳ 5, ಬಿಹಾರ 5, ಒಡಿಶಾ 4, ಅಸ್ಸಾಂ 3, ಛತ್ತೀಸ್ಗಢ 2, ಹರ್ಯಾಣ 2, ತೆಲಂಗಾಣ 2 ಮತ್ತು ಹಿಮಾಚಲಪ್ರದೇಶ 1 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
234 ಸದಸ್ಯಬಲದ ರಾಜ್ಯಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ 134 ಸದಸ್ಯರನ್ನು ಹೊಂದಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟದ ಬಳಿ 80 ಸದಸ್ಯ ಬಲ ಇದೆ. ವಿವಿಧ ಮಸೂದೆಗಳ ಅನುಮೋದನೆಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಹೆಚ್ಚಿನ ಸದಸ್ಯ ಬಲ ಇರುವುದು ಅಗತ್ಯ. ಇವತ್ತಿನ ರಾಜ್ಯಸಭಾ ಚುನಾವಣೆ ಬಳಿಕ ಮೇಲ್ಮನೆಯಲ್ಲಿ ಎನ್‌ಡಿಎ ಸದಸ್ಯ ಬಲ ಮತ್ತಷ್ಟು ಏರಿಕೆ ಆಗಲಿದೆ.
ರಾಜ್ಯಸಭಾ ಚುನಾವಣೆ ಆಗಲಿರುವ 10 ರಾಜ್ಯಗಳಲ್ಲಿ ಏಳು ರಾಜ್ಯಗಳ 26 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಬಹುದು. ಶರದ್ ಪವಾರ್, ರಾಮದಾಸ್ ಅಠವಳೆ, ತಂಬಿ ದುರೈ, ಬಾಬುಲ್ ಸುಪ್ರಿಯೋ, ವಿನೋದ್ ತಾವಡೆ, ಅಭಿಷೇಕ್ ಮನು ಸಿಂಘ್ವಿ ಮೊದಲಾದವರು ಅವಿರೋಧವಾಗಿ ರಾಜ್ಯಸಭೆಗೆ ಪ್ರವೇಶ ಮಾಡಲಿದ್ದಾರೆ.
ಒಡಿಶಾ, ಬಿಹಾರ ಮತ್ತು ಹರ್ಯಾಣ ರಾಜ್ಯಗಳ 11 ರಾಜ್ಯಸಭಾ ಸ್ಥಾನಗಳಿಗೆ ಮತದಾನ ನಡೆಯಬಹುದು. ಬಿಹಾರದಲ್ಲಿ ಐದು ಸ್ಥಾನಗಳಿವೆ. ಇದರಲ್ಲಿ ನಾಲ್ಕು ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ. ಜೆಡಿಯುನ ನಿತೀಶ್ ಕುಮಾರ್ ಮತ್ತು ರಾಮನಾಥ್ ಠಾಕೂರ್, ಬಿಜೆಪಿಯ ನಿತಿನ್ ನಬಿನ್ ಮತ್ತು ಶಿವಂ ಕುಮಾರ್ ಗೆಲ್ಲುವ ನಿರೀಕ್ಷೆ ಇದೆ. ಐದನೇ ಸ್ಥಾನಕ್ಕೆ ಎನ್ಡಿಎನ ಉಪೇಂದ್ರ ಖುಶವಾಹ ಮತ್ತು ವಿಪಕ್ಷಗಳ ಎ.ಡಿ ಸಿಂಗ್ ನಡುವೆ ಪೈಪೋಟಿ ಇದೆ.
ಒಡಿಶಾದಲ್ಲಿ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ. ಬಿಜೆಪಿಯ ಇಬ್ಬರು ಮತ್ತು ಬಿಜೆಡಿಯ ಒಬ್ಬರ ಗೆಲುವು ಖಾತ್ರಿ ಇದೆ. ನಾಲ್ಕನೇ ಸ್ಥಾನಕ್ಕೆ ಪೈಪೋಟಿ ಇದೆ. ಹರ್ಯಾಣದಲ್ಲಿ ಎರಡು ಸ್ಥಾನ ಇದೆ. ಬಿಜೆಪಿಯ ಸಂಜಯ್ ಭಾಟಿಯಾ ಗೆಲುವು ಖಾತ್ರಿ ಇದೆ. ಎರಡನೇ ಸ್ಥಾನಕ್ಕೆ ಬಿಜೆಪಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ನಡುವೆ ಪೈಪೋಟಿ ಇದೆ.


























