ದೈವಾರಾಧನೆ ಪರಂಪರೆಗೆ ಧಕ್ಕೆಯಾಗಿದೆ ಎಂದು ಪಂಬದ ಸಮುದಾಯದವರ ಆರೋಪ
ಮಂಗಳೂರು : ತುಳುನಾಡಿನ ಪ್ರಸಿದ್ಧ ದೈವಾರಾಧನೆ ಮತ್ತೊಮ್ಮೆ ವಿವಾದಕ್ಕೆ ಗುರಿಯಾಗಿದೆ. ಮಂಗಳೂರಿನ ಪ್ರಸಿದ್ಧ ದೈವಸ್ಥಾನವೊಂದರ ನೇಮೋತ್ಸವದಲ್ಲಿ ಬಂಟ ದೈವಕ್ಕೆ ಕ್ರೈಸ್ತ ಧರ್ಮದ ಯುವಕನಿಂದ ದೈವ ನರ್ತನ ಸೇವೆ ಮಾಡಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಜನವರಿ 31ರಂದು ಮಂಗಳೂರಿನ ಪ್ರಸಿದ್ಧ ದೈವಕ್ಷೇತ್ರದಲ್ಲಿ ಶ್ರೀ ಜಾರಂದಾಯ ಹಾಗೂ ಬಂಟ ದೈವಕ್ಕೆ ನೇಮೋತ್ಸವ ನಡೆದಿತ್ತು. ಸಂಪ್ರದಾಯದಂತೆ ದೈವ ನರ್ತನ ಸೇವೆಯನ್ನು ನಲಿಕೆ, ಪರವ ಹಾಗೂ ಪಂಬದ ಸಮುದಾಯದವರು ಮಾತ್ರ ಮಾಡಬೇಕು ಎಂಬ ಕಟ್ಟುನಿಟ್ಟಿನ ನಿಯಮವಿದೆ. ಆದರೆ ಈ ಬಾರಿ ಬಂಟ ದೈವಕ್ಕೆ ಕ್ರೈಸ್ತ ಧರ್ಮದ ಯುವಕನಿಂದ ನರ್ತನ ಮಾಡಿಸಲಾಗಿದೆ ಎಂದು ಪಂಬದ ಸಮುದಾಯದ ಸಂಶೋಧಕಿ ಡಾ.ರತಿ ಎಂಬವರು ಆರೋಪಿಸಿದ್ದಾರೆ.
ಜಾರಂದಾಯ ದೈವದ ನರ್ತನದ ಸೇವೆಯನ್ನು ಕಾಸರಗೋಡಿನ ಬಾಯಾರು ಸಮೀಪದ ಚಿಪ್ಪಾರಿನ ಪ್ರಸಿದ್ಧ ದೈವ ನರ್ತಕ ಚಿಪ್ಪಾರು ಗಣೇಶ್ ಪಂಬದ ಎಂಬವರಿಗೆ ನೀಡಲಾಗಿತ್ತು. ಜಾರಂದಾಯ ದೈವದ ನರ್ತನದ ಸೇವೆಯನ್ನು ಚಿಪ್ಪಾರು ಗಣೇಶ್ ಮಾಡಿದ್ದಾರೆ. ಆದರೆ ಬಂಟ ದೈವದ ನರ್ತನ ಸೇವೆಗೆ ಕ್ರೈಸ್ತ ಧರ್ಮದ ಯುವಕನನ್ನು ಕರೆದುಕೊಂಡು ಬಂದಿದ್ದರು ಎನ್ನಲಾಗಿದೆ. ನರ್ತನ ಮಾಡಿದ ಯುವಕನ ತಂದೆ ಪಂಬದ ಸಮುದಾಯದವರಾಗಿದ್ದು, ತಾಯಿ ಕ್ರೈಸ್ತ ಧರ್ಮದವರು ಎಂಬ ವಿಚಾರ ಇದೀಗ ಚರ್ಚೆಗೆ ಕಾರಣವಾಗಿದೆ.
ಈ ವಿಚಾರವಾಗಿ ಸಂಶೋಧಕಿ ಡಾ.ರತಿ ಮಾತನಾಡಿ, ಜಾರಂದಾಯ ದೈವಕ್ಕೆ ಗಣೇಶ್ ಪಂಬದ ನೇಮ ಕಟ್ಟಿದರೂ, ಬಂಟ ದೈವಕ್ಕೆ ಕ್ರೈಸ್ತ ಯುವಕನಿಂದ ನರ್ತನ ಮಾಡಿಸಲಾಗಿದೆ. ಆ ಯುವಕನ ತಂದೆ ಪಂಬದ ಸಮುದಾಯದವರಾದರೂ ತಾಯಿ ಕ್ರೈಸ್ತ ಧರ್ಮಕ್ಕೆ ಸೇರಿದವರು. ನಮ್ಮ ಪರಂಪರೆಯ ಪ್ರಕಾರ ಅಳಿಯಕಟ್ಟಿನಿಂದ ದೈವ ನರ್ತನ ಸೇವೆಯ ಅಧಿಕಾರ ದತ್ತವಾಗುತ್ತದೆ. ಈ ಪ್ರಕಾರ ಕ್ರೈಸ್ತ ತಾಯಿಗೆ ಹುಟ್ಟಿದ ಮಗ ನೇಮ ಕಟ್ಟಲು ಅರ್ಹನಾಗುವುದಿಲ್ಲ. ಬೇರೆ ಧರ್ಮ ಅಥವಾ ಸಮುದಾಯದವರನ್ನು ದೈವ ನರ್ತನ ಪ್ರಕ್ರಿಯೆಯಲ್ಲಿ ಬಳಸುವುದು ಸರಿಯಲ್ಲ ಎಂದು ಹೇಳಿದ್ದಾರೆ.
ದೈವಸ್ಥಾನದ ಆಡಳಿತ ಮಂಡಳಿಗೂ ಈ ವಿಚಾರ ಮೊದಲಿಗೆ ತಿಳಿದಿರಲಿಲ್ಲ. ಯಾರು ಕೂಡಾ ಇದನ್ನು ನಿರೀಕ್ಷಿಸಿರಲೂ ಇಲ್ಲ. ಗಣೇಶ ಪಂಬದ ನಂಬಿಕೆ ದ್ರೋಹ ಮಾಡಿದ್ದಾರೆ. ನಮ್ಮ ಸಮುದಾಯದಲ್ಲಿ ಪರಂಪರೆಯ ಪಂಬದರು ತುಂಬ ಜನ ಇದ್ದಾರೆ. ಅಂಥವರಿಗೆ ಇದರಿಂದ ತುಂಬ ನೋವಾಗಿದೆ. ಇದನ್ನು ಸಮಾಜದ ಮುಂದೆ ಇಡುತ್ತಿದ್ದೇವೆ. ತೀರ್ಮಾನ ಜನರಿಗೆ ಬಿಟ್ಟಿದ್ದು. ದೈವ ನರ್ತಕನ ಆವೇಶ ನೋಡಿದರೆ ನೇಮ ಎಂದು ಅನ್ನಿಸಲ್ಲ. ಕ್ರೈಸ್ತ ಹುಡುಗ ಕುಣಿಯೋದು ನೋಡಿ ನಮಗೆ ಇದು ನಾಟಕವೇನೋ ಎನ್ನಿಸಿತು. ನಮ್ಮದು ಅಳಿಯಕಟ್ಟು ಆದ್ದರಿಂದ ನಮ್ಮಲ್ಲಿ ಬೇರೆ ಜಾತಿ, ಧರ್ಮದವರು ಬಂದು ನೇಮ ಕಟ್ಟುವಂತಿಲ್ಲ. ನಾವು ಇದನ್ನು ಪ್ರಶ್ನೆ ಮಾಡಿದಾಗ ನಾವು ಯಾರನ್ನು ಬೇಕಾದರೂ ಕರ್ಕೊಂಡು ಬಂದು ದೈವ ಕಟ್ಟಿಸುತ್ತೇವೆ ಎಂದು ಉತ್ತರ ಕೊಟ್ಟಿದ್ದಾರೆ. ಹೆಂಗಸಾದ ನಿನಗೆ ಬಣ್ಣ ಹಚ್ಚಿ ದೈವ ನರ್ತನ ಮಾಡಲು ಆಗುತ್ತಾ ಎಂದು ನನ್ನನ್ನೇ ಪ್ರಶ್ನಿಸಿದ್ದಾರೆ ಎಂದು ಡಾ.ರತಿ ಹೇಳಿದ್ದಾರೆ.


























