ಯುದ್ಧದಿಂದಾಗಿ ಅಡುಗೆ ಅನಿಲ ಪೂರೈಕೆ ವ್ಯತ್ಯಯವಾಗಿ ಸಮಸ್ಯೆ
ನವದೆಹಲಿ: ಮಧ್ಯಪ್ರಾಚ್ಯದ ಯುದ್ಧ ತೀವ್ರಗೊಂಡಿದ್ದು, ಸದ್ಯಕ್ಕೆ ನಿಲ್ಲುವ ಸಾಧ್ಯತೆಯಿಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗ್ಯಾಸ್ ಮಿತವಾಗಿ ಬಳಸುವಂತೆ ಸಲಹೆ ನೀಡಿದೆ. ಯುದ್ಧದಿಂದಾಗಿ ಭಾರತದಲ್ಲಿ ಎಲ್‌ಪಿಜಿ ಕೊರತೆ ಉಂಟಾಗಿದ್ದು, ಯುದ್ಧ ಇದೇ ರೀತಿ ಮುಂದುವರಿದರೆ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಸಾಧ್ಯತೆಯಿದೆ. ಹೋಟೆಲ್‌ಗಳು ಹಾಗೂ ವಾಣಿಜ್ಯ ಸಂಸ್ಥಾಪನೆಗಳು ಕಲ್ಲಿದ್ದಲು ಹಾಗೂ ಪರ್ಯಾಯ ಇಂಧನ ಬಳಸುವ ಮೂಲಕ ಮಿತವ್ಯಯ ಮಾಡಬೇಕು ಹಾಗೂ ಮನೆಗಳಲ್ಲಿ ಪಿಎನ್‌ಜಿ ಅನಿಲ ಬಳಕೆ ಮಾಡುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.
ನವದೆಹಲಿಯಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಪೆಟ್ರೋಲಿಯಂ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ಅಡುಗೆ ಅನಿಲದ ಕೊರತೆ ಸರ್ಕಾರದ ಗಮನದಲ್ಲಿರುವ ಪ್ರಮುಖ ವಿಷಯವಾಗಿದ್ದು, ಪರಿಸ್ಥಿತಿ ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ತೀವ್ರಗೊಂಡಿರುವ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರಿಂದ ಭಾರತದಲ್ಲೂ ಎಲ್‌ಪಿಜಿ ಸರಬರಾಜಿನ ಮೇಲೆ ಪರಿಣಾಮವಾಗಿದೆ. ಈ ಕೊರತೆಯಿಂದಾಗಿ ರೆಸ್ಟೊರೆಂಟ್‌ಗಳು ಮತ್ತು ಹೋಟೆಲ್‌ಗಳಂತಹ ವಾಣಿಜ್ಯ ಬಳಕೆದಾರರು ಹೆಚ್ಚು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆಯನ್ನು ತಗ್ಗಿಸಲು ವಾಣಿಜ್ಯ ಬಳಕೆದಾರರು ತಾತ್ಕಾಲಿಕವಾಗಿ ಕಲ್ಲಿದ್ದಲು ಮತ್ತು ಸೀಮೆಎಣ್ಣೆ ಬಳಸುವಂತೆ ಸಲಹೆ ನೀಡಿದೆ.
ಇದಕ್ಕಾಗಿ ಕೋಲ್ ಇಂಡಿಯಾ ಸಂಸ್ಥೆಗೆ ಸಣ್ಣ, ಮಧ್ಯಮ ಹಾಗೂ ಇತರ ವಾಣಿಜ್ಯ ಬಳಕೆದಾರರಿಗೆ ಕಲ್ಲಿದ್ದಲು ಸರಬರಾಜು ಖಚಿತಪಡಿಸಲು ಆದೇಶ ನೀಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಸರ್ಕಾರದ ಪ್ರಕಾರ ದೇಶದಾದ್ಯಂತ ಇರುವ ಸುಮಾರು 25,000 ಎಲ್‌ಪಿಜಿ ವಿತರಕರಲ್ಲಿ ಯಾವುದೇ ಸ್ಥಳದಲ್ಲೂ ಸಂಪೂರ್ಣ ಅನಿಲ ಕೊರತೆ ಉಂಟಾಗಿಲ್ಲ. ಆದರೆ, ಜನರು ಭಯದಿಂದ ಹೆಚ್ಚಿನ ಪ್ರಮಾಣದಲ್ಲಿ ಬುಕ್ಕಿಂಗ್ ಮಾಡುತ್ತಿರುವುದು ಮುಖ್ಯ ಸಮಸ್ಯೆಯಾಗಿದೆ. ಸಾಮಾನ್ಯವಾಗಿ ಪ್ರತಿದಿನ ಸುಮಾರು 50 ಲಕ್ಷ ಎಲ್‌ಪಿಜಿ ಸಿಲಿಂಡರ್ ಬುಕ್ಕಿಂಗ್ ಆಗುತ್ತಿತ್ತು. ಆದರೆ, ಈಗ ಈ ಸಂಖ್ಯೆ 75 ಲಕ್ಷಕ್ಕೆ ಏರಿಕೆಯಾಗಿದೆ. ಈ ಹೆಚ್ಚಿದ ಬೇಡಿಕೆಯನ್ನು ಪೂರೈಸಲು ಸರ್ಕಾರ ನಿಯಮಿತ ಕೋಟಾದ ಮೇಲೆ ಹೆಚ್ಚುವರಿಯಾಗಿ 48,000 ಕಿಲೋಲೀಟರ್ ಎಲ್‌ಪಿಜಿ ವಿತರಣೆ ಮಾಡಲು ಅನುಮತಿ ನೀಡಿದೆ.
ಇದೇ ವೇಳೆ ದೇಶದಲ್ಲಿ ಪೈಪ್ ಮೂಲಕ ಸರಬರಾಜಾಗುವ ಪಿಎನ್‌ಜಿ ಅನಿಲದ ಕೊರತೆ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಪಿಎನ್‌ಜಿ ಸಂಪರ್ಕ ಇರುವ ಮನೆಗಳು ಎಲ್‌ಪಿಜಿ ಬಳಕೆಯನ್ನು ಕಡಿಮೆ ಮಾಡಲು ತಾತ್ಕಾಲಿಕವಾಗಿ ಪಿಎನ್‌ಜಿ ಅನಿಲವನ್ನು ಬಳಕೆ ಮಾಡಬಹುದು ಎಂದು ಸಲಹೆ ನೀಡಿದೆ.


























