ಪ್ರವಾಸೋದ್ಯಮ, ಡ್ರೈಫ್ರುಟ್ಸ್‌ ವಹಿವಾಟು ಕುಂಠಿತಗೊಳಿಸಿದ ಯುದ್ಧ

ಎಲ್ಲ ಕ್ಷೇತ್ರಗಳಿಗೂ ತಟ್ಟುತ್ತಿದೆ ಮಧ್ಯಪ್ರಾಚ್ಯದ ಯುದ್ಧದ ಬಿಸಿ

ಮಂಗಳೂರು: ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಘನಘೋರ ಕದನ ಹದಿನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಸದ್ಯಕ್ಕೆ ಈ ಯುದ್ಧ ನಿಲ್ಲುವ ಸಾಧ್ಯತೆ ಗೋಚರಿಸುತ್ತಿಲ್ಲ. ಈಗಾಗಲೇ ಯುದ್ಧ ಜಗತ್ತಿನಾದ್ಯಂತ ಪ್ರತಿಕೂಲ ಪರಿಣಾಮ ಬೀರತೊಡಗಿದೆ. ಭಾರತದಲ್ಲಿ ಗ್ಯಾಸ್‌ ಅಭಾವದಿಂದ ಹೋಟೆಲ್, ಕ್ಯಾಟರಿಂಗ್‌ ಉದ್ಯಮ ಹೊಡೆತ ತಿಂದಿದೆ. ರಫ್ತು, ಆಮದು ವಹಿವಾಟುಗಳು ಇನ್ನಿಲ್ಲದಂತೆ ಸಂಕಷ್ಟಕ್ಕೀಡಾಗಿವೆ. ಪ್ರವಾಸೋದ್ಯಮ, ಡ್ರೈಫ್ರೂಟ್ಸ್‌ ವಹಿವಾಟಿನ ಮೇಲೂ ಪರಿಣಾಮ ಬೀರಿದೆ. ವಿಮಾನ ವ್ಯತ್ಯಯದಿಂದಾಗಿ ವಿದೇಶಿ ಪ್ರವಾಸಿಗರ ಸಂಖ್ಯೆ ಭಾರಿ ಕಡಿತವಾಗಿದೆ ಹಾಗೂ ವಿದೇಶಕ್ಕೆ ಹೋಗುವವರ ಸಂಖ್ಯೆ ಇಳಿಮುಖವಾಗಿದೆ. ಎಲ್ಲೇ ಯುದ್ಧ ನಡೆದರೂ ಅದರ ಪರಿಣಾಮ ಇಡೀ ಜಗತ್ತಿನ ಮೇಲೆ ಆಗುತ್ತದೆ.

ಪ್ರತಿನಿತ್ಯ ಗಲ್ಫ್ ದೇಶಗಳಿಂದ ಬರುವ ವಿಮಾನಗಳು ರದ್ದಾಗುತ್ತಿವೆ. ಕತಾರ್, ಎಮಿರೇಟ್ಸ್, ಒಮನ್ ಏರ್‌ಲೈನ್, ಇತಿಹಾದ್‌, ಗಲ್ಫ್ ಏರ್, ಕುವೈತ್ ಏರ್‌ವೇಸ್, ಏರ್ ಅರೇಬಿಯಾ ಫ್ಲೈಟ್‌ಗಳಿಂದ ಪ್ರತಿದಿನ 5,000 ಜನ ಪ್ರವಾಸಿಗರು ಬೆಂಗಳೂರಿಗೆ ಬರುತ್ತಿದ್ದರು. ಆದರೆ ಮಾರ್ಚ್ ತಿಂಗಳಲ್ಲಿ ವಿದೇಶಿಗರು ಫ್ಲೈಟ್ ಕ್ಯಾನ್ಸಲ್‌ನಿಂದ ಬರ್ತಿಲ್ಲ. ಯಾವುದೇ ಪರ್ಯಾಯ ವ್ಯವಸ್ಥೆ ಆಆಗದಿರುವುದರಿಂದ ವಿದೇಶಿಗರು ರಿಫಂಡ್ ಕೇಳ್ತಿದ್ದಾರೆ. ಇದರಿಂದ ಬೆಂಗಳೂರಿನ ಶೇಕಡಾ 50% ಹೋಟೆಲ್ ರೂಮ್‌ಗಳು ಖಾಲಿಯಾಗಿವೆ.























































 
 

ಮಂಗಳೂರು, ಬೆಂಗಳೂರಿನಿಂದ ಪ್ರತಿ ವರ್ಷ ರಂಜಾನ್‌ಗೆ ದುಬೈ, ಸೌದಿ ಅರೇಬಿಯಾ ಸೇರಿದಂತೆ ಹಲವು ಗಲ್ಫ್ ನಗರಗಳಿಗೆ ತೆರಳುತ್ತಿದ್ದ ಪ್ರವಾಸಿಗರು ಯುದ್ದದ ಭೀತಿ ಹಾಗೂ ಫ್ಲೈಟ್ ಅಲಭ್ಯತೆಯಿಂದ ಕ್ಯಾನ್ಸಲ್ ಮಾಡಿದ್ದಾರೆ. ಜೊತೆಗೆ ಬೇಸಿಗೆ ರಜೆಗೆ ಫಾರಿನ್ ಟೂರ್‌ ಪ್ಲಾನ್ ಮಾಡಿದ್ದ ಬೆಂಗಳೂರಿಗರು ಸಹ ಕ್ಯಾನ್ಸಲ್ ಮಾಡುತ್ತಿದ್ದು, ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಇದರರ ಜೊತೆಗೆ ವಿಮಾನ ಟಿಕೆಟ್‌ ದರ ಸಹ ಹೆಚ್ಚಾಗಿದೆ.

ಒಣಹಣ್ಣುಗಳ ಉದ್ಯಮಕ್ಕೆ ಹೊಡೆತ

ಯುದ್ಧದ ಬಿಸಿ ಭಾರತದ ಡ್ರೈಫ್ರೂಟ್ಸ್ ಉದ್ಯಮಕ್ಕೂ ತಟ್ಟಿದೆ. ಡ್ರೈಫ್ರೂಟ್ಸ್‌ ಅಮದು ಮತ್ತು ರಫ್ತು ಎರಡೂ ಬಾಧಿತವಾಗಿ ಉದ್ಯಮ ಸಂಕಷ್ಟ ಎದುರಿಸುತ್ತಿದೆ. ಕರಾವಳಿಯಲ್ಲಿ ಗೇರುಬೀಜ ಸೇರಿದಂತೆ ಒಣಹಣ್ಣುಗಳು ಬಹುದೊಡ್ಡ ಉದ್ಯಮ ಇದ್ದು, ಅವುಗಳ ವ್ಯಾಪಾರಕ್ಕೆ ಭಾರಿ ಹೊಡೆತ ಬಿದ್ದಿದೆ. ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ಬರಬೇಕಿದ್ದ ಖರ್ಜೂರ ಸೇರಿದಂತೆ ಹಲವು ಒಣಹಣ್ಣುಗಳ ಪೂರೈಕೆ ಅಡಚಣೆಗೆ ಒಳಗಾಗಿದ್ದು, ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ಶುರುವಾಗಿದೆ.

ಮಂಗಳೂರಿನಿಂದ ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಗೋವಾ ಸೇರಿ ದಕ್ಷಿಣ ಭಾರತದ ಹಲವು ರಾಜ್ಯಗಳಿಗೆ ಡ್ರೈಫ್ರೂಟ್ಸ್ ಸರಬರಾಜು ಅಗುತ್ತದೆ. ಕರ್ನಾಟಕದ ವಿವಿಧ ಕಡೆಗಳಿಗೂ ಇಲ್ಲಿಂದಲೇ ಡ್ರೈಫ್ರೂಟ್ಸ್ ಪೂರೈಕೆಯಾಗುತ್ತಿದೆ. ಯುದ್ಧ ಪರಿಸ್ಥಿತಿಯಿಂದಾಗಿ ಇರಾನ್ ಮತ್ತು ಅಫ್ಘಾನಿಸ್ತಾನದಿಂದ ಡ್ರೈಫ್ರೂಟ್ಸ್ ಆಮದು ಅಸ್ತವ್ಯಸ್ತಗೊಂಡಿದೆ. ಇದರ ಪರಿಣಾಮವಾಗಿ ಖರ್ಜೂರ, ಅಂಜೀರ, ಅಪ್ರಿಕಾಟ್, ಬಾದಾಮ್, ಕಪ್ಪುದ್ರಾಕ್ಷಿ, ಫೈನ್ ನಟ್ಸ್ ಸೇರಿದಂತೆ ಹಲವು ಒಣಹಣ್ಣುಗಳ ಬೆಲೆಗಳು ಶೇ.15ರಿಂದ 20ರವರೆಗೆ ಏರಿಕೆ ಕಂಡಿವೆ. ಭಾರತಕ್ಕೆ 60 ಶೇಕಡಾದಷ್ಟು ಖರ್ಜೂರ ಇರಾನ್‌ನಿಂದಲೇ ಬರುತ್ತದೆ.

ಇದಕ್ಕೂ ಮೊದಲು ಅಫ್ಘಾನಿಸ್ತಾನದಿಂದ ಡ್ರೈಫ್ರೂಟ್ಸ್‌ಗಳನ್ನು ಪಾಕಿಸ್ತಾನದ ವಾಘಾ ಗಡಿ ಮಾರ್ಗದ ಮೂಲಕ ರಸ್ತೆ ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಪಾಕಿಸ್ತಾನ ಗಡಿಯನ್ನು ಸಂಪೂರ್ಣವಾಗಿ ಮುಚ್ಚಿರುವುದರಿಂದ ಆ ಮಾರ್ಗದಲ್ಲಿಯೂ ಆಮದು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಫ್ಘಾನಿಸ್ತಾನದಿಂದ ಬರಬೇಕಾದ ಸರಕುಗಳನ್ನು ಈಗ ಸಮುದ್ರ ಮಾರ್ಗದ ಮೂಲಕ ಇರಾನ್‌ನ ಅಬ್ಬಾಸ್ ಬಂದರು ತಲುಪಿ, ಅಲ್ಲಿಂದ ಭಾರತಕ್ಕೆ ಕಳುಹಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಾಗಾಟ ಸಮಯವೂ ಹೆಚ್ಚಾಗಿ, ವೆಚ್ಚವೂ ಹೆಚ್ಚಾಗಿದೆ.

ರಂಜಾನ್ ಸೀಸನ್ ಹಿನ್ನೆಲೆಯಲ್ಲಿ ಖರ್ಜೂರಕ್ಕೆ ಬೇಡಿಕೆ ಹೆಚ್ಚಿರುತ್ತದೆ. ಆದರೆ ಈ ವೇಳೆಯಲ್ಲೇ ಪೂರೈಕೆ ಕಡಿಮೆಯಾಗಿರುವುದು ವ್ಯಾಪಾರಿಗಳಿಗೆ ತಲೆನೋವಾಗುತ್ತಿದೆ. ಈಗಾಗಲೇ ಬಂದಿದ್ದ ಕೆಲವು ಸ್ಟಾಕ್‌ಗಳು ಮಾರಾಟವಾಗಿದ್ದು, ಹೊಸ ಸರಕುಗಳ ಆಗಮನದಲ್ಲಿ ವಿಳಂಬವಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

error: Content is protected !!
Scroll to Top