ಅಡ್ಡ ಮತದಾನ, ಪಕ್ಷಾಂತರ ತಡೆಯಲು ಬೆಂಗಳೂರಿನ ರೆಸಾರ್ಟ್‌ಗಳಲ್ಲಿ ಶಾಸಕರಿಗೆ ಆಶ್ರಯ
ಬೆಂಗಳೂರು: ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಅಸ್ಸಾಂ ಹಾಗೂ ಒಡಿಶಾದ ಹಲವು ಕಾಂಗ್ರೆಸ್ ಶಾಸಕರನ್ನು ಕುದುರೆ ವ್ಯಾಪಾರ ತಡೆಯುವ ಉದ್ದೇಶದಿಂದ ಬೆಂಗಳೂರಿಗೆ ಕರೆತರಲಾಗಿದ್ದು, ರೆಸಾರ್ಟ್‌ಗಳಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಶ್ರಯ ಕಲ್ಪಿಸಿದ್ದಾರೆ.
ಒಡಿಶಾದಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅಡ್ಡ ಮತದಾನದ ಭೀತಿ ಹೆಚ್ಚಾಗಿರುವ ನಡುವೆ ಕಾಂಗ್ರೆಸ್ ತನ್ನ ಶಾಸಕರನ್ನು ಸುರಕ್ಷಿತವಾಗಿ ಇರಿಸಲು ಬೆಂಗಳೂರಿಗೆ ಕಳುಹಿಸಿದೆ. ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಒಡಿಶಾದ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕರೆಸಿಕೊಳ್ಳಲಾಗಿದೆ. ಗುರುವಾರ ರಾತ್ರಿ ಭುವನೇಶ್ವರದಿಂದ ಇಂಡಿಗೋ ವಿಮಾನದ ಮೂಲಕ ಒಡಿಶಾದ ಕಾಂಗ್ರೆಸ್ ಶಾಸಕರು ಮತ್ತು ನಾಯಕರು ಬೆಂಗಳೂರಿಗೆ ಆಗಮಿಸಿದರು. ರಾತ್ರಿ ಸುಮಾರು 11 ಗಂಟೆ ವೇಳೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಬಿ) ಬಂದ ಶಾಸಕರನ್ನು ಡಿ.ಕೆ ಶಿವಕುಮಾರ್ ಆಪ್ತರು ಸ್ವಾಗತಿಸಿದರು.
ವಿಮಾನ ನಿಲ್ದಾಣದಿಂದ ಪೊಲೀಸ್ ಬಂದೋಬಸ್ತ್ ಮತ್ತು ಎಸ್ಕಾರ್ಟ್ ವ್ಯವಸ್ಥೆಯೊಂದಿಗೆ ಶಾಸಕರನ್ನು ನೇರವಾಗಿ ರಾಮನಗರ ಜಿಲ್ಲೆಯ ಬಿಡದಿಯಲ್ಲಿರುವ ವಂಡರ್ ಲಾ ರೆಸಾರ್ಟ್‌ಗೆ ಕರೆದೊಯ್ಯಲಾಗಿದೆ.
ಅಸ್ಸಾಂನಲ್ಲಿ ಆಪರೇಷನ್ ಕಮಲ ತಡೆಯಲು 10ಕ್ಕೂ ಹೆಚ್ಚು ಕಾಂಗ್ರೆಸ್ ಶಾಸಕರು ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ. ಅಸ್ಸಾಂನಲ್ಲಿ ಪಕ್ಷ ಬದಲಾವಣೆಯ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ಹಿನ್ನೆಲೆ ಕಾಂಗ್ರೆಸ್ ತೊರೆದು ಶಾಸಕರು ಎನ್‌ಡಿಎ ಸೇರುತ್ತಿದ್ದಾರೆ. ‘ಕೈ’ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಡಿಕೆಶಿ ಮತ್ತೆ ಟ್ರಬಲ್ ಶೂಟರ್ ಆಗಿದ್ದಾರೆ.
ಡಿಕೆ ಶಿವಕುಮಾರ್ ಅಸ್ಸಾಂ ಚುನಾವಣಾ ಉಸ್ತುವಾರಿ ಗೌರವ್ ಗೊಗೋಯ್ ಜೊತೆಗೆ ಮಾತುಕತೆ ನಡೆಸಿದ್ದರು. ಅಸ್ಸಾಂ ಕಾಂಗ್ರೆಸ್ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಮಹತ್ವದ ಜವಾಬ್ದಾರಿಯನ್ನು ಡಿಕೆಶಿ ಹೊತ್ತುಕೊಂಡಿದ್ದಾರೆ. ನಾಳೆ ಪ್ರಧಾನಿ ಮೋದಿ ಅಸ್ಸಾಂಗೆ ತೆರಳುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಅಸ್ಸಾಂ ‘ಕೈ’ ಶಾಸಕರು ಬೆಂಗಳೂರಿಗೆ ಬರುತ್ತಿದ್ದಾರೆ. ಮೇ ತಿಂಗಳಲ್ಲಿ ಚುನಾವಣೆ ನಡೆಯಲಿರುವ ಅಸ್ಸಾಂನ ಕೆಲವು ಶಾಸಕರು ಇಂದು ಮಧ್ಯರಾತ್ರಿ ಬೆಂಗಳೂರಿಗೆ ಆಗಮಿಸುವ ಸಾಧ್ಯತೆ ಇದೆ.

























