ಹೀಗಾದರೆ ಮಾತ್ರ ಯುದ್ಧ ನಿಲ್ಲುತ್ತದೆ
ಟೆಹ್ರಾನ್: ಅಮೆರಿಕ, ಇಸ್ರೇಲ್-ಇರಾನ್ ಮಧ್ಯೆ ನಡುವೆ ನಡೆಯುತ್ತಿರುವ ಯುದ್ಧ ಇನ್ನಷ್ಟು ತೀವ್ರಗೊಂಡು ಜಗತ್ತಿನಲ್ಲಿ ತೈಲ ಮತ್ತು ಇಂಧನಕ್ಕಾಗಿ ಹಾಹಾಕಾರ ಉಂಟಾಗಿದೆ. ಈ ನಡುವೆ ಇರಾನ್ ಯುದ್ಧ ನಿಲ್ಲಿಸಲು ಜಗತ್ತಿನೆದುರು ಮೂರು ಷರತ್ತುಗಳನ್ನಿಟ್ಟಿದೆ. ಅಮೆರಿಕದ ನೆಲೆಗಳು ಮತ್ತು ಮಧ್ಯಪ್ರಾಚ್ಯ ದೇಶಗಳ ಮೇಲೆ ನಡೆಯುತ್ತಿರುವ ದಾಳಿ ಕೊನೆಯಾಗಬೇಕಾದರೆ ನಮ್ಮ ಮೂರು ಷರತ್ತನ್ನುಗಳನ್ನು ಒಪ್ಪಿಕೊಳ್ಳಬೇಕೆಂದು ಇರಾನ್ ಹೇಳಿದೆ
ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಇರಾನ್‌ನ ಕಾನೂನುಬದ್ಧ ಹಕ್ಕುಗಳನ್ನು ಗುರುತಿಸಬೇಕು, ಸಂಘರ್ಷದ ಸಮಯದಲ್ಲಿ ಉಂಟಾದ ಹಾನಿಗಳಿಗೆ ಪರಿಹಾರ ನೀಡಬೇಕು. ಭವಿಷ್ಯದಲ್ಲಿ ಆಕ್ರಮಣ ಮಾಡುವುದಿಲ್ಲ ಎಂದು ದೃಢವಾದ ಅಂತರರಾಷ್ಟ್ರೀಯ ಖಾತರಿಗಳನ್ನು ನೀಡಬೇಕು ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಷ್ಯಾ ಮತ್ತು ಪಾಕಿಸ್ತಾನದ ನಾಯಕರ ಜೊತೆ ಮಾತನಾಡುವ ವೇಳೆ ನಾನು ಈ ವಿಚಾರಗಳ ಬಗ್ಗೆ ಮಾತನಾಡಿದ್ದೇನೆ. ಈ ಪ್ರದೇಶದಲ್ಲಿ ಶಾಂತಿಗೆ ಇರಾನ್‌ನ ಬದ್ಧತೆಯನ್ನು ನಾನು ಪುನರುಚ್ಚರಿಸಿದ್ದೇನೆ. ಇಸ್ರೇಲ್ ಮತ್ತು ಅಮೆರಿಕ ಹೊತ್ತಿಸಿದ ಈ ಯುದ್ಧವನ್ನು ಕೊನೆಗೊಳಿಸಲು ಇರುವ ಏಕೈಕ ಮಾರ್ಗ ಇದು ಎಂದು ಬರೆದಿದ್ದಾರೆ.
ಈ ಹಿಂದೆ ಡೊನಾಲ್ಡ್ ಟ್ರಂಪ್ ಇರಾನ್ ಬೇಷರತ್ತಾಗಿ ಶರಣಾಗಬೇಕು ಎಂದು ಬೇಡಿಕೆ ಇಟ್ಟಿದ್ದರು. ಈ ಬೇಡಿಕೆಗೆ ಪ್ರತಿಕ್ರಿಯಿಸಿದ ಮಸೌದ್ ಪೆಜೆಶ್ಕಿಯಾನ್ ಅದು ಅಮೆರಿಕವನ್ನು ಸಮಾಧಿಗೆ ಕೊಂಡೊಯ್ಯಬೇಕಾದ ಕನಸು ಎಂದು ತಿರುಗೇಟು ನೀಡಿದ್ದರು.

























