ಕೇರಳದ ದೇವಸ್ಥಾನದಲ್ಲಿ ರಾಜಕೀಯದವರ ಸಮ್ಮುಖದಲ್ಲಿ ಮದುವೆ
ತಿರುವನಂತಪುರಂ: ಕಳೆದ ವರ್ಷ ಪ್ರಯಾಗ್‌ರಾಜ್‌ನಲ್ಲಿ ನಡೆದ ಕುಂಭಮೇಳದಲ್ಲಿ ರುದ್ರಾಕ್ಷಿ ಮಾಲೆಗಳನ್ನು ಮಾರುತ್ತಿರುವಾಗ ಕ್ಯಾಮರಾ ಕಣ್ಣಿಗೆ ಬಿದ್ದು ಸಖತ್ ಜನಪ್ರಿಯಳಾಗಿದ್ದ ಮಧ್ಯ ಪ್ರದೇಶದ ಇಂದೋರ್‌ನ ಮೊನಾಲಿಸಾ ನಿನ್ನೆ ಕೇರಳದಲ್ಲಿ ಮುಸ್ಲಿಂ ಯುವಕನನ್ನು ಮನೆಯವರ ವಿರೋಧ ಲೆಕ್ಕಿಸದೆ ಮದುವೆಯಾಗಿ ಮತ್ತೊಮ್ಮೆ ಸುದ್ದಿಯಾಗಿದ್ದಾಳೆ. ಪ್ರಿಯಕರ ಮೊಹಮ್ಮದ್ ಫರ್ಮಾನ್ ಖಾನ್ ಎಂಬಾತನ ಜೊತೆ ಕುಂಭಮೇಳದ ಮೊನಾಲಿಸಾ ಬೋಂಸ್ಲೆಯ ಮದುವೆ ಕೇರಳದ ದೇವಸ್ಥಾನವೊಂದರಲ್ಲಿ ನೆರವೇರಿದೆ.
ಮದುವೆಗೆ ಪೋಷಕರ ವಿರೋಧ ಇದ್ದ ಕಾರಣ ಕೇರಳದ ಪೂವಾರ್‌ನ ಅರುಮಾನೂರ್ ನೈನಾರ್ ದೇಗುಲದಲ್ಲಿ ವಿವಾಹವಾಗಿದ್ದಾರೆ. ಕೇರಳದ ಸಚಿವ ವಿ.ಶಿವನ್ ಕುಟ್ಟಿ, ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಸಹಿತ ಹಲವು ರಾಜಕೀಯದವರು ಈ ಮದುವೆಯಲ್ಲಿ ಭಾಗಿಯಾಗಿರುವುದು ಹೆಚ್ಚು ಗಮನ ಸೆಳೆದಿದೆ.
ಮಹಾರಾಷ್ಟ್ರದ ಫರ್ಮಾನ್ ಖಾನ್ ನಟ ಹಾಗೂ ಮೋಡೆಲ್. ಮಧ್ಯಪ್ರದೇಶದ ಮೊನಾಲಿಸಾಗೆ ಒಂದೂವರೆ ವರ್ಷದ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ. ಪರಿಚಯ ದಿನಕಳೆದಂತೆ ಪ್ರೀತಿಗೆ ತಿರುಗಿತು. ಪೂವಾರ್‌ನಲ್ಲಿ ಈಗ ಮೊನಾಲಿಸಾ ಅಭಿನಯದ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಶೂಟಿಂಗ್ ಸ್ಪಾಟ್‌ನಿಂದಲೇ ತಂಬಾನೂರು ಠಾಣೆಗೆ ಬಂದು ತನ್ನ ತಂದೆಯ ವಿರುದ್ಧ ಮೊನಾಲಿಸಾ ದೂರು ನೀಡಿದ್ದಳು.
ಸಂಬಂಧಿ ಜೊತೆ ಮದುವೆ ಮಾಡಿಕೊಳ್ಳುವಂತೆ ತಂದೆ ಒತ್ತಾಯ ಹೇರಿದ್ದರು. ಇದಕ್ಕೆ ಮೊನಾಲಿಸಾ ನಿರಾಕರಿಸಿದ್ದಳು. ಪ್ರಿಯಕರನ ಜೊತೆ ಠಾಣೆಗೆ ಬಂದು ದೂರು ನೀಡಿದ್ದಳು. ದೂರಿನ ಹಿನ್ನೆಲೆಯಲ್ಲಿ ಮೊನಾಲಿಸಾ ತಂದೆ ಜೈಸಿಂಗ್ ಭೋಂಸ್ಲೆಯನ್ನು ತಂಬಾನೂರು ಠಾಣೆಗೆ ಪೊಲೀಸರು ಕರೆಸಿದ್ದರು. ಯಾರ ಜೊತೆ ಜೀವನ ಮಾಡಬೇಕು ಎಂದು ನಿರ್ಧರಿಸುವ ಹಕ್ಕು ಮೊನಾಲಿಸಾಗಿದೆ ಎಂದು ತಂದೆಗೆ ಪೊಲೀಸರು ಮನವರಿಕೆ ಮಾಡಿದರು. ಬಳಿಕ ಪ್ರಿಯಕರನ ಜೊತೆ ಹೋಗಲು ಮೊನಾಲಿಸಾಗೆ ಅನುಮತಿ ಕೊಟ್ಟರು. ಈ ಹಿನ್ನೆಲೆಯಲ್ಲಿ ಸಂಜೆ ದೇವಸ್ಥಾನದಲ್ಲಿ ಮದುವೆಯಾಗಿದೆ.
ಈ ಮದುವೆಗೆ ಮೊನಾಲಿಸಾ ಕುಟುಂಬದವರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಮನೆಯವರನ್ನು ಧಿಕ್ಕರಿಸಿ ಮೊನಾಲಿಸಾ ದೇವಸ್ಥಾನದಲ್ಲಿ ವಿವಾಹ ಆಗಿದ್ದಾರೆ. ಅದು ಕೂಡ ಕೇರಳದ ತಿರುವನಂತಪುರದಲ್ಲಿ ಅನ್ನೋದು ವಿಶೇಷ.
ಮೊನಾಲಿಸಾ ಇಂದೋರ್‌ನವಳು.ಮೊಹಮ್ಮದ್ ಫರ್ಮಾನ್ ಅವರು ಮಹಾರಾಷ್ಟ್ರದವರು. ಇವರ ಪರಿಚಯ ಸಿನಿಮಾ ಸೆಟ್‌ನಲ್ಲಿ ಆಯಿತು. ಮೊಹ್ಮದ್ ಕೂಡ ಚಿತ್ರರಂಗದಲ್ಲಿದ್ದಾರೆ. ಇಬ್ಬರು ಸಾಕಷ್ಟು ಕ್ಲೋಸ್ ಆದರು. ಆರು ತಿಂಗಳಲ್ಲಿ ನಮಗೆ 60 ವರ್ಷಗಳ ಬಾಂಧವ್ಯ ಬೆಳೆದಿದೆ ಎಂದೆನಿಸುತ್ತಿದೆ ಎಂದು ಅವರು ಹೇಳಿದ್ದಾರೆ. ಇಬ್ಬರದ್ದೂ ಬೇರೆ ಬೇರೆ ರಾಜ್ಯ. ಇವರಿಗೂ ಕೇರಳಕ್ಕೂ ಯಾವುದೇ ಸಂಬಂಧ ಇಲ್ಲ. ಆದಾಗ್ಯೂ ಇವರು ಕೇರಳಕ್ಕೆ ಬಂದು ಮದುವೆ ಆಗಿದ್ದಾರೆ.
ಕುಂಭಮೇಳದಲ್ಲಿ ಕಾಣಿಸಿಕೊಂಡ ಈ ಬೆಕ್ಕಿನ ಕಣ್ಣಿನ ಹುಡುಗಿ ತನ್ನ ಸ್ನಿಗ್ಧ ಸೌಂದರ್ಯದ ಮೂಲಕ ಗಮನ ಸೆಳೆದಿದ್ದಳು. ಯೂಟ್ಯೂಬರ್‌ಗಳು, ಸೋಷಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳ ದೆಸೆಯಿಂದಾಗಿ ಆಕೆ ರಾತ್ರಿ ಬೆಳಗಾಗುವುದರೊಳಗಾಗಿ ದೇಶಾದ್ಯಂತ ಪ್ರಸಿದ್ಧಳಾಗಿದ್ದಳು. ಆಕೆಯ ಸಾವಿರಾರು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿ ಯಾವ ಸಿನೆಮಾ ತಾರೆಗೂ ಕಡಿಮೆಯಿಲ್ಲದಂತೆ ಪ್ರಚಾರ ಪಡೆದಿದ್ದಳು. ಈ ಕಾರಣಕ್ಕೆ ಆಕೆಗೆ ಸಿನಿಮಾಗಳಲ್ಲಿ ನಟಸಿಲು ಅವಕಾಶ ಸಿಕ್ಕಿತ್ತು.

























