13 ವರ್ಷದಿಂದ ಕೋಮಾದಲ್ಲಿರುವ ಯುವಕನಿಗೆ ಗೌರವಯುತವಾದ ಸಾವು ಕರುಣಿಸಲು ನ್ಯಾಯಾಲಯದಿಂದ ಅನುಮತಿ
ನವದೆಹಲಿ : ಐತಿಹಾಸಿಕ ಮಹತ್ವದ ತೀರ್ಪೋಂದರಲ್ಲಿ ಸುಪ್ರೀಂ ಕೋರ್ಟ್ ಕಳೆದ ಹದಿಮೂರು ವರ್ಷಗಳಿಂದ ಕೋಮಾದಲ್ಲಿರುವ ಹರೀಶ್ ರಾಣಾ (32) ಎಂಬ ಯುವಕನಿಗೆ ದಯಾಮರಣ ನೀಡಲು ಅನುಮತಿಸಿದೆ. ದಯಾಮರಣ ದೇಶದಲ್ಲಿ ಕಳೆದ ಹಲವು ದಶಕಗಳಿಂದ ಚರ್ಚೆಯಲ್ಲಿರುವ ವಿಷಯವಾಗಿದ್ದು, ಇದರ ಸಾಧಕ ಬಾಧಕಗಳ ಬಗ್ಗೆ ಭಾರಿ ಭಿನ್ನಾಭಿಪ್ರಾಯವಿದೆ. ಈ ಹಿನ್ನೆಲೆಯಲ್ಲಿ ಇಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲೇ ಅತ್ಯಂತ ಅಪರೂಪದ್ದು ಎನ್ನಲಾಗಿದೆ. ಮುಂದಿನ ದಿನಗಳಲ್ಲಿ ಈ ತೀರ್ಪು ಹಲವು ಬಾರಿ ಉಲ್ಲೇಖಕ್ಕೆ ಬರಲಿದೆ ಎನ್ನಲಾಗುತ್ತಿದೆ.
ಹರೀಶ್ ರಾಣಾ ಬ್ರೈನ್ ಡೆಡ್ ಆಗಿ ಓಡಾಡಲು ಅಥವಾ ಮಾತನಾಡಲು ಸಾಧ್ಯವಾಗದೆ ಜೀವಂತ ಶವದಂತಾಗಿದ್ದಾನೆ. ಆತನ ವೃದ್ಧ ಪೋಷಕರು ಚೇತರಿಕೆಯ ಭರವಸೆಯನ್ನು ತ್ಯಜಿಸಿ ತಮ್ಮ ಮಗನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಾಲಯ ಅಂತೂ ಅಸ್ತು ಎಂದಿದೆ. 13 ವರ್ಷಗಳಲ್ಲಿ ಮಗನನ್ನು ಉಳಿಸಿಕೊಳ್ಳಲು ಈ ದಂಪತಿ ಬಹಳಷ್ಟು ಕಷ್ಟಪಟ್ಟಿದ್ದಾರೆ. ಆಸ್ತಿಯನ್ನೂ ಮಾರಿದ್ದಾರೆ. ಈಗ ಅವರು ಆರ್ಥಿಕವಾಗಿ ಮತ್ತು ಭಾವನಾತ್ಮಕವಾಗಿ ಸಂಪೂರ್ಣ ಶೂನ್ಯ ಸ್ಥಿತಿಗೆ ತಲುಪಿದ್ದಾರೆ.
ಚಂಡೀಗಢ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಪಡೆಯುತ್ತಿದ್ದ ರಾಣಾ 2013, ಆಗಸ್ಟ್ 2ರಂದು 20 ವರ್ಷದವನಿರುವಾಗ ಪಿಜಿಯ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಬಿದ್ದು ತಲೆಗೆ ತೀವ್ರ ಗಾಯಗಳಾಗಿ ಸಂಪೂರ್ಣ ಅಂಗವೈಕಲ್ಯಕ್ಕೆ ಒಳಗಾಗಿದ್ದರು. ಅಂದಿನಿಂದ ಅವರು ಉಸಿರಾಟಕ್ಕಾಗಿ ಟ್ರಾಕಿಯೊಸ್ಟೊಮಿ ಟ್ಯೂಬ್ ಮತ್ತು ಪೋಷಣೆಗಾಗಿ ಗ್ಯಾಸ್ಟ್ರೋಸ್ಟೊಮಿ ಟ್ಯೂಬ್ ಅನ್ನು ಅವಲಂಬಿಸಿದ್ದಾರೆ.
ಹರೀಶ್ ಅವರ ಪೋಷಕರು, ಇತರ ಇಬ್ಬರು ಮಕ್ಕಳನ್ನು ಸಹ ನೋಡಿಕೊಳ್ಳುತ್ತಿದ್ದಾರೆ, ದೆಹಲಿಯಲ್ಲಿರುವ ತಮ್ಮ ಮನೆಯನ್ನು ಮಾರಿ, ಏಮ್ಸ್ನಲ್ಲಿ ಅವರ ಹಾಸಿಗೆಯ ಪಕ್ಕದಲ್ಲಿಯೇ ಇರಲು ಗಾಜಿಯಾಬಾದ್ಗೆ ಸ್ಥಳಾಂತರಗೊಂಡರು. ಐದು ವರ್ಷದ ಹಿಂದೆ ತಮ್ಮ ಮಗನ ದೀರ್ಘಕಾಲದ ನೋವನ್ನು ಕೊನೆಗೊಳಿಸಲು ಅವರು ದಯಾಮರಣಕ್ಕೆ ಕಾನೂನು ಅನುಮತಿಯನ್ನು ಕೋರಿದ್ದರು.
ರಾಣಾ ಅವರ ಉಸಿರಾಟಕ್ಕೆ ನೆರವಾಗಿರುವ ವೈದ್ಯಕೀಯ ಉಪಕರಣಗಳನ್ನು ತೆಗೆಯುವ ಮೂಲಕ ಅವರಿಗೆ ಗೌರವಯುತವಾದ ಸಾವನ್ನು ಕರುಣಿಸಬೇಕು ಎಂದು ಜಸ್ಟಿಸ್ ಜೆ.ಬಿ.ಪರ್ದಿವಾಲಾ ಮತ್ತು ಜಸ್ಟಿ ಕೆ.ವಿ.ವಿಶ್ವನಾಥನ್ ಅವರ ನ್ಯಾಯಪೀಠ ಹೇಳಿದೆ.
ಏಮ್ಸ್ ಸಲ್ಲಿಸಿದ ವೈದ್ಯಕೀಯ ಮೌಲ್ಯಮಾಪನದ ಪ್ರಕಾರ ರಾಣಾ ಈ ಸ್ಥಿತಿಯಿಂದ ಚೇತರಿಸಿಕೊಳ್ಳುವ ಸಾಧ್ಯತೆಯಿಲ್ಲ. ವರದಿಯು ಅತ್ಯಂತ ದುಃಖಕರವಾಗಿದೆ ಎಂದು ನ್ಯಾಯಮೂರ್ತಿ ಜೆ.ಬಿ. ಪರ್ದಿವಾಲಾ ಉಲ್ಲೇಖಿಸಿದ್ದಾರೆ. ಇದು ನಮಗೆ ಕಷ್ಟಕರವಾದ ನಿರ್ಧಾರ, ಆದರೆ ಈ ಹುಡುಗ ಇಷ್ಟೊಂದು ಯಾತನೆಯಲ್ಲಿ ಉಳಿಯಲು ನಾವು ಬಿಡುವುದಿಲ್ಲ, ಇಂದು ನಾವು ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕಾದ ಸಮಯ ಬಂದಿದೆ ಎಂದು ತೀರ್ಪು ಓದುವಾಗ ಭಾವನಾತ್ಮಕವಾಗಿ ಹೇಳಿದ್ದಾರೆ.
ಈ ಮೊದಲು ಸುಪ್ರೀಂ ಕೋರ್ಟ್ 2011ರಲ್ಲಿ ಹೊನ್ನಾವರ ಮೂಲದ ಮುಂಬಯಿಯಲ್ಲಿ ನರ್ಸ್ ಆಗಿದ್ದ ಅರುಣಾ ಶಾನ್ಬಾಗ್ ಪ್ರಕರಣದಲ್ಲಿ ದಯಾಮರಣ ವಿಚಾರ ಚರ್ಚೆಗೆ ಬಂದಿತ್ತು.
























