ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 201 ಮೊಬೈಲ್‌ ವಶ

ವಾರಿಸುದಾರರಿಲ್ಲದ ಬ್ಯಾಗ್‌ ಪರಿಶೀಲಿಸಿದಾಗ ಸಿಕ್ಕಿದ ಮೊಬೈಲ್‌

ಮಂಗಳೂರು: ರೈಲಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 201 ಹಳೆಯ ಮೊಬೈಲ್‌ಗಳನ್ನು ರೈಲ್ವೆ ರಕ್ಷಣಾ ದಳದವರು (ಆರ್‌ಪಿಎಫ್) ಮಂಗಳೂರು ಜಂಕ್ಷನ್ ನಿಲ್ದಾಣದಲ್ಲಿ ಸೋಮವಾರ ವಶಪಡಿಸಿಕೊಂಡಿದ್ದಾರೆ.

ಕೇರಳ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಣ್ಗಾವಲು ತೀವ್ರಗೊಳಿಸಿರುವ ದಕ್ಷಿಣ ರೈಲ್ವೆಯ ಪಾಲಕ್ಕಾಡ್ ವಿಭಾಗದ ಆರ್‌ಪಿಎಫ್ ರೈಲುಗಳ ಮೂಲಕ ನಗದು, ಚಿನ್ನ ಮತ್ತು ಇತರ ಬೆಲೆಬಾಳುವ ವಸ್ತುಗಳ ಅಕ್ರಮ ಸಾಗಾಟದ ವಿರುದ್ಧ ನಡೆಸಿದ ವಿಶೇಷ ಕಾರ್ಯಾಚರಣೆಯ ವೇಳೆ ಸುಮಾರು 10.05 ಲಕ್ಷ ರೂ. ಮೌಲ್ಯದ 201 ಹಳೆಯ ಮೊಬೈಲ್ ಫೋನ್‌ಗಳು ಸಿಕ್ಕಿವೆ.





















































 
 

ಸೋಮವಾರ ಮುಂಜಾನೆ ಸುಮಾರು 3 ಗಂಟೆಗೆ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 3ರಲ್ಲಿ ಜಾಮ್ನನಗರ – ತಿರುನಲ್ವೇಲಿ ಜಂಕ್ಷನ್ ಎಕ್ಸ್‌ಪ್ರೆಸ್‌ನಲ್ಲಿ ತಪಾಸಣೆ ನಡೆಸಿದಾಗ ರೈಲಿನ ಜನರಲ್ ಕೋಚ್‌ನ ಮೇಲಿನ ಲಗೇಜ್ ರಾಕ್‌ನಲ್ಲಿ ವಾರೀಸುದಾರರಿಲ್ಲದ ಮೂರು ಬ್ಯಾಗ್‌ ಇರುವುದು ಕಂಡು ಬಂತು. ಅನುಮಾನದ ಮೇಲೆ ಬ್ಯಾಗ್‌ಗಳನ್ನು ತೆರೆದಾಗ ವಿವಿಧ ಬ್ರ್ಯಾಂಡ್‌ಗಳ 201 ಹಳೆಯ ಮೊಬೈಲ್ ಫೋನ್‌ಗಳು ಪತ್ತೆಯಾಗಿವೆ.

ಆರ್‌ಪಿಎಫ್ ಹೆನ್‌ಕಾನ್‌ಸ್ಟೆಬಲ್ ಸುಜೀಶ್ ಮತ್ತು ಕಾನ್‌ಸ್ಟೆಬಲ್ ರಾಮಕೃಷ್ಣ ತಪಾಸಣೆ ತಪಾಸಣೆ ನಡೆಸಿದರು. ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಬಾಡಿ-ವೋರ್ನ್ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಬ್ಯಾಗ್‌ಗಳು ಪತ್ತೆಯಾದ ಸಮಯದಲ್ಲಿ ಕೋಚ್‌ನಲ್ಲಿ ಇಬ್ಬರು ಶಂಕಿತ ವ್ಯಕ್ತಿಗಳಿರುವುದು ಕಂಡುಬಂದಿದೆ.

ಶಂಕಿತರನ್ನು ಪತ್ತೆಹಚ್ಚಲು ಕ್ರೈಮ್ ಇಂಟೆಲಿಜೆನ್ಸ್ ಬ್ರಾಂಚ್ ಮತ್ತು ವಿಭಾಗೀಯ ಅಪರಾಧ ತಡೆ ಮತ್ತು ಪತ್ತೆ ದಳದ ಸಮನ್ವಯದೊಂದಿಗೆ ಪ್ರಯತ್ನ ನಡೆಯುತ್ತಿದೆ. ಮುಂದಿನ ತನಿಖೆಗಾಗಿ ಮತ್ತು ವಶಪಡಿಸಿಕೊಂಡ ವಸ್ತುಗಳ ಕುರಿತು ಸೂಕ್ತ ಕಾನೂನು ಕ್ರಮಕ್ಕಾಗಿ ರೈಲ್ವೆ ಪೊಲೀಸ್‌ಗೆ ಹಸ್ತಾಂತರಿಸಲಾಗಿದೆ ಎಂದು ಆರ್ ಪಿ ಎಫ್ ಅಧಿಕಾರಿಗಳು ತಿಳಿಸಿದ್ದಾರೆ. ವಶಪಡಿಸಿಕೊಳ್ಳಲಾದ 201 ಮೊಬೈಲ್‌ಗಳನ್ನು ಆರೋಪಿಗಳು ರೈಲ್ವೆ ಪ್ರಯಾಣಿಕರಿಂದ ಕಳವು ಮಾಡಿರುವ ಸಾಧ್ಯತೆ ಇದೆ. ಇವು ತುಂಬ ಹಳೆಯ ಮೊಬೈಲ್‌ಗಳಲ್ಲ. ಇವುಗಳನ್ನು ಮಾರಾಟ ಮಾಡಲು ಕೊಂಡೊಯ್ಯುತ್ತಿದ್ದರೆಂಬ ಸಂದೇಹವಿದೆ.

error: Content is protected !!
Scroll to Top